

ಚಿಕ್ಕಬಳ್ಳಾಪುರ: ಬಣ್ಣ ಮಾಸಿ ಕಳಾಹೀನ ಸ್ಥಿತಿಗೆ ತಲುಪುತ್ತಿರುವ ಜಿಲ್ಲೆಯ ಸರ್ಕಾರಿ ಶಾಲೆಗಳನ್ನು ವಿವಿಧ ಯೋಜನೆಗಳಡಿ ಮಾದರಿಯಾಗಿ ಅಭಿವೃದ್ಧಿಪಡಿಸುತ್ತಿರುವ ಜತೆಗೆ ದತ್ತು ಸ್ವೀಕಾರದ ಮೂಲಕವೂ ಹೊಸ ರೂಪ ನೀಡುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.
ರಾಜ್ಯದಲ್ಲಿ 35 ಸಾವಿರ ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕಾರದ ಮೂಲಕ ಅಭಿವೃದ್ಧಿ ಪಡಿಸುತ್ತಿರುವುದರ ನಡುವೆ ಜಿಲ್ಲೆಯಲ್ಲೂ ಶಾಸಕರು ಕ್ಷೇತ್ರಾಭಿವೃದ್ಧಿ ಅನುದಾನದಡಿ 17 ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು, 5.11 ಕೋಟಿ ರೂ.ವೆಚ್ಚದಲ್ಲಿ ಬಣ್ಣ ಮಾಸಿರುವ ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದ್ದಾರೆ.
ಶಾಲೆಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಗಳು, ಅಗತ್ಯವಿರುವ ಮೂಲಸೌಕರ್ಯಗಳ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಈಗಾಗಲೇ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಶಾಸಕರ ಗಮನಕ್ಕೆ ತಂದಿದ್ದು ಕ್ಷೇತ್ರಾಭಿವೃದ್ಧಿ ನಿಧಿ ಯೋಜನೆಯಲ್ಲಿ ಅಭಿವೃದ್ಧಿಗೆ ಜನಪ್ರತಿನಿಧಿಗಳು ದತ್ತು ಸ್ವೀಕರಿಸಿದ್ದಾರೆ.
ರಾಜ್ಯದಲ್ಲಿಯೇ ಜಿಲ್ಲೆ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಬೇಕೆನ್ನುವ ಉದ್ದೇಶದಿಂದ ಕಲಿಕೆಯಲ್ಲಿ ಹಲವು ಸುಧಾರಣೆ, ಸರಳ ಬೋಧನಾ ತಂತ್ರಜ್ಞಾನ, ಮಕ್ಕಳ ಸಮಸ್ಯೆಗಳ ಪರಿಹಾರ, ಶಾಲೆಗಳಿಗೆ ಹೈಟೆಕ್ ಸ್ಪರ್ಶ ಸೇರಿ ಹಲವು ಪ್ರಗತಿಪರ ಕೆಲಸಗಳನ್ನು ಕೈಗೊಳ್ಳಲಾಗುತ್ತಿದ್ದು, ಇದಕ್ಕೀಗ ಶಾಲೆಗಳ ದತ್ತು ಸ್ವೀಕಾರವೂ ಸೇರಿದೆ.
5 ಕೋಟಿ ರೂ., 17 ಶಾಲೆ: ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ 86 ಲಕ್ಷ ರೂ.ವೆಚ್ಚದಲ್ಲಿ 5 ಶಾಲೆಗಳನ್ನು, ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ 1.75 ಕೋಟಿ ರೂ. ವೆಚ್ಚದಲ್ಲಿ 3 ಶಾಲೆ, ಚಿಂತಾಮಣಿ ಶಾಸಕ ಎಂ.ಕೃಷ್ಣಾರೆಡ್ಡಿ 1 ಕೋಟಿ ರೂ. ವೆಚ್ಚದಲ್ಲಿ 3 ಶಾಲೆ, ಗೌರಿಬಿದನೂರು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ 80 ಲಕ್ಷ ರೂ. ವೆಚ್ಚದಲ್ಲಿ 3, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ 70 ಲಕ್ಷ ರೂ. ವೆಚ್ಚದಲ್ಲಿ 3 ಶಾಲೆಗಳನ್ನು ಅಭಿವೃದ್ಧಿಪಡಿಸಲು ದತ್ತು ತೆಗೆದುಕೊಂಡಿದ್ದಾರೆ.
ಕೆಪಿಎಸ್ ಸೇರಿ 3 ಶಾಲೆಗಳ ಆಯ್ಕೆ: ಕೊಠಡಿಗಳು ಮತ್ತು ಶೌಚಗೃಹ ನಿರ್ಮಾಣ, ಕಟ್ಟಡ ದುರಸ್ತಿ, ಬೋಧನಾ ಸಾಮಗ್ರಿಗಳು, ಪೀಠೋಪಕರಣಗಳ ವಿತರಣೆ, ಕುಡಿಯುವ ನೀರು ಸೇರಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯಾ ವ್ಯಾಪ್ತಿಯಲ್ಲಿನ 10 ಶಾಲೆಗಳ ಪಟ್ಟಿ ತಯಾರಿಸಿ, ಶಾಸಕರಿಗೆ ನೀಡಿದ್ದು ಇದರಲ್ಲಿ ಕಡ್ಡಾಯವಾಗಿ ಒಂದು ಕರ್ನಾಟಕ ಪಬ್ಲಿಕ್ ಶಾಲೆ ಸೇರಿ ಕನಿಷ್ಠ 3 ಶಾಲೆಗಳನ್ನು ಆಯ್ಕೆ ಮಾಡಲು ಮನವಿ ಮಾಡಿದ್ದರು.
ದತ್ತು ಸ್ವೀಕಾರಗೊಂಡ ಶಾಲೆಗಳು : ಚಿಕ್ಕಬಳ್ಳಾಪುರ ಕ್ಷೇತ್ರದ ವ್ಯಾಪ್ತಿಯಲ್ಲಿನ ಹಿರಿಯ ಪ್ರಾಥಮಿಕ ಶಾಲೆ (ಪೆರೇಸಂದ್ರ, ಮಂಚೇನಹಳ್ಳಿ, ದಿಬ್ಬೂರು ಮತ್ತು ಗಂಗರೆಕಾಲುವೆ) ಮತ್ತು ಕರ್ನಾಟಕ ಪಬ್ಲಿಕ್ ಶಾಲೆ (ಮಂಡಿಕಲ್), ಬಾಗೇಪಲ್ಲಿ ವ್ಯಾಪ್ತಿಯಲ್ಲಿನ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ (ಬಾಗೇಪಲ್ಲಿ ಪಟ್ಟಣ), ಹಿರಿಯ ಪ್ರಾಥಮಿಕ ಶಾಲೆ (ಗೂಳೂರು) ಮತ್ತು ಕರ್ನಾಟಕ ಪಬ್ಲಿಕ್ ಶಾಲೆ (ಗುಡಿಬಂಡೆ), ಚಿಂತಾಮಣಿಯಲ್ಲಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಬಟ್ಲಹಳ್ಳಿ, ಆನೂರು) ಮತ್ತು ಕರ್ನಾಟಕ ಪಬ್ಲಿಕ್ ಶಾಲೆ (ಕೈವಾರ), ಶಿಡ್ಲಘಟ್ಟ ವ್ಯಾಪ್ತಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆ (ಶಿಡ್ಲಘಟ್ಟ ನಗರ ಕೋಟೆ ಮತ್ತು ತಿಮ್ಮಸಂದ್ರ) ಮತ್ತು ಕರ್ನಾಟಕ ಪಬ್ಲಿಕ್ ಶಾಲೆ (ಬಶೆಟ್ಟಹಳ್ಳಿ), ಗೌರಿಬಿದನೂರಿನಲ್ಲಿ ಹಿರಿಯ ಪ್ರಾಥಮಿಕ ಶಾಲೆ ( ಕುರೂಡಿ, ಮೇಳ್ಯ) ಮತ್ತು ನಗರದ ಕೋಟೆ ಪ್ರದೇಶದಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಉದ್ಯೋಗ ಖಾತ್ರಿ, ಜಿಲ್ಲಾ ಪಂಚಾಯಿತಿ ವಿಶೇಷ ಅನುದಾನ ಸೇರಿ ವಿವಿಧ ಯೋಜನೆಗಳಡಿ ಜಿಲ್ಲೆಯ 38 ಶಾಲೆಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಜತೆಗೆ ಸಚಿವರು ಮತ್ತು ನಾಲ್ವರು ಶಾಸಕರು ಕ್ಷೇತ್ರಾಭಿವೃದ್ಧಿ ಅನುದಾನದಡಿ 17 ಶಾಲೆಗಳನ್ನು ಅಭಿವೃದ್ಧಿಗೆ ದತ್ತು ತೆಗೆದುಕೊಂಡಿದ್ದಾರೆ. ಎಸ್.ಜಿ.ನಾಗೇಶ್, ಡಿಡಿಪಿಐ