ಶಾಸಕರ ಕಾಳಜಿಗೆ ಸೋಂಕಿತರು ಬಚಾವ್!

11-RNR-04
Published on

ರಾಣೆಬೆನ್ನೂರ: ಸೋಮವಾರ ರಾತ್ರಿ ಶಾಸಕ ಅರುಣಕುಮಾರ ಪೂಜಾರ ಕೈಚೆಲ್ಲಿ ಕುಳಿತಿದ್ದರೆ, ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿದ್ದ 32 ಸೋಂಕಿತರು ಆಕ್ಸಿಜನ್ ಕೊರತೆಯಿಂದ ತೊಂದರೆಗೆ ಸಿಲುಕುವ ಪರಿಸ್ಥಿತಿ ತಲೆದೋರಿತ್ತು. ಶಾಸಕರ ಸಮಯ ಹಾಗೂ ಕರ್ತವ್ಯ ಪ್ರಜ್ಞೆಯಿಂದ ಅವಘಡವಾಗುವುದು ತಪ್ಪಿದೆ.

ಆಗಿದ್ದೇನು...?: ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ 35 ಆಕ್ಸಿಜನ್ ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲವೂ ಭರ್ತಿಯಾಗಿವೆ. ನಿತ್ಯವೂ ತಾಲೂಕು ಆಸ್ಪತ್ರೆಗೆ 90 ಆಕ್ಸಿಜನ್ ಸಿಲಿಂಡರ್ ಬೇಕು. ಆದರೆ, ಸರ್ಕಾರದಿಂದ 70 ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿದ್ದ ಎಲ್ಲ ಆಕ್ಸಿಜನ್ ಸಿಲಿಂಡರ್​ಗಳು ಖಾಲಿಯಾದವು. ಇದರಿಂದಾಗಿ ರೋಗಿಗಳು ಉಸಿರಾಟದ ಸಮಸ್ಯೆ ಎದುರಿಸತೊಡಗಿದರು. ಈ ಹಂತದಲ್ಲಿ ಜಿಲ್ಲಾಡಳಿತ ಕೈ ಚೆಲ್ಲಿ ಕುಳಿತುಕೊಂಡಿತು.

ಈ ವಿಚಾರ ಶಾಸಕ ಅರುಣಕುಮಾರ ಪೂಜಾರ ಗಮನಕ್ಕೆ ಬರುತ್ತಿದ್ದಂತೆ, ತಾಲೂಕು ಆಸ್ಪತ್ರೆಗೆ ಅವರು ಭೇಟಿ ನೀಡಿ ಪರಿಶೀಲಿಸಿದರು. ರೋಗಿಗಳ ತೊಂದರೆ ನೋಡಿದ ತಕ್ಷಣವೇ ಜಿಲ್ಲಾಡಳಿತ ಹಾಗೂ ಇತರೆಡೆ ಆಕ್ಸಿಜನ್ ಸಿಲಿಂಡರ್ ಕೇಳಿದರೂ ಯಾರೊಬ್ಬರು ಸ್ಪಂದಿಸಲಿಲ್ಲ. ಕೊನೆಗೆ ಜಿಲ್ಲಾ ಉಸ್ತ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಸಂರ್ಪಸಿ ಆಕ್ಸಿಜನ್ ಸಮಸ್ಯೆಯ ಮಾಹಿತಿ ನೀಡಿದರು. ಕೂಡಲೆ, ಕಾರ್ಯಪ್ರವೃತ್ತರಾದ ಸಚಿವ ಬೊಮ್ಮಾಯಿ ಅವರು ದಾವಣಗೆರೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಆಕ್ಸಿಜನ್ ವ್ಯವಸ್ಥೆ ಮಾಡಿದರು. ಅವುಗಳನ್ನು ಶಾಸಕ ಅರುಣಕುಮಾರ ಪೂಜಾರ ಆಸ್ಪತ್ರೆಗೆ ತಂದುಕೊಟ್ಟರು. ರೋಗಿಗಳು ಬದುಕಿತು ಬಡಜೀವ ಎಂದು ನಿಟ್ಟುಸಿರುಬಿಟ್ಟರು.

ಸುಳ್ಳು ಹೇಳಿದರೆ ಡಿಸಿ?

ಸೋಮವಾರವಷ್ಟೇ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು, ರಾಣೆಬೆನ್ನೂರ ನಗರಕ್ಕೆ ಭೇಟಿ ನೀಡಿದ ಸಮಯದಲ್ಲಿ ಜಿಲ್ಲೆಯಲ್ಲಿ ಎಲ್ಲಿಯೂ ಆಕ್ಸಿಜನ್ ಕೊರತೆಯಿಲ್ಲ ಎಂದಿದ್ದರು. ಈ ಘಟನೆ ನೋಡಿದರೆ ಜಿಲ್ಲಾಧಿಕಾರಿ ಆಕ್ಸಿಜನ್ ಕೊರತೆಯ ವಿಷಯದಲ್ಲಿ ಸುಳ್ಳು ಹೇಳಿದರೆ ಎಂಬ ಪ್ರಶ್ನೆ ಉದ್ಭವಿಸಿದೆ.

ಸೋಮವಾರ ರಾತ್ರಿ ತಾಲೂಕಿನ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗಿತ್ತು. ಈ ಕುರಿತು ಗಮನಕ್ಕೆ ಬರುತ್ತಿದ್ದಂತೆ ಕೂಡಲೆ, ಆಸ್ಪತ್ರೆಗೆ ತೆರಳಿ ಪರಿಶೀಲಿಸಿದೆ. ಸ್ಥಳೀಯವಾಗಿ ಆಕ್ಸಿಜನ್ ಸಿಗಲಿಲ್ಲ. ಕೊನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸ್ಪಂದಿಸಿ ದಾವಣಗೆರೆಯಿಂದ ಆಕ್ಸಿಜನ್ ಸಿಲಿಂಡರ್ ಕಳುಹಿಸಿಕೊಟ್ಟರು. ಇದರಿಂದ ರೋಗಿಗಳಿಗೆ ಅನುಕೂಲವಾಯಿತು. ಇಲ್ಲವಾದರೆ ದೊಡ್ಡ ಸಮಸ್ಯೆ ಎದುರಾಗುತ್ತಿತ್ತು.| ಅರುಣಕುಮಾರ ಪೂಜಾರ ಶಾಸಕ

ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಖಾಲಿಯಾಗಿದ್ದರಿಂದ ಬಹಳ ಸಮಸ್ಯೆಯಾಗಿತ್ತು. ಆದರೆ, ಶಾಸಕ ಅರುಣಕುಮಾರ ಪೂಜಾರ ಅವರು ಕೂಡಲೆ ಬಂದು, ಬೇರೆಡೆ ಸಂಪರ್ಕ ಮಾಡಿ ಆಕ್ಸಿಜನ್ ಸಿಲಿಂಡರ್ ತರಿಸಿಕೊಟ್ಟರು. ಸೋಂಕಿತರಿಗೆ ಕೂಡಲೆ ಆಕ್ಸಿಜನ್ ಪೂರೈಕೆ ಮಾಡಿದ್ದೇವೆ. ನಂತರ ನಮ್ಮ ಕಂಟೇನರ್ ಕಳುಹಿಸಿ ಗ್ರಾಸಿಂನಿಂದ ಹೆಚ್ಚಿನ ಆಕ್ಸಿಜನ್ ತರಿಸಿಕೊಂಡಿದ್ದೇವೆ. ಶಾಸಕರು ತುರ್ತಾಗಿ ಆಕ್ಸಿಜನ್ ತರಿಸದಿದ್ದರೆ, ದೊಡ್ಡ ಅನಾಹುತ ನೋಡಬೇಕಾಗಿ ಬರುತ್ತಿತ್ತು.| ಡಾ. ಗೋವಿಂದ ತಾಲೂಕು ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net