ಶಾಸಕರ ಅವ್ಯವಹಾರವನ್ನು ಬಯಲಿಗೆ ತರುವೆ

5 budikote 6
Published on

ಬಂಗಾರಪೇಟೆ ಗ್ರಾಮಾಂತರ: ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ತನ್ನ ತಾಯಿ ಹೆಸರಿಗೆ ಕಲ್ಲುಬಂಡೆ ಜಮೀನು ಮಂಜೂರು ಮಾಡಿಸಿಕೊಂಡಿರುವುದು ಸೇರಿ ಹಲವಾರು ವರ್ಷಗಳಿಂದ ಮಾಡಿರುವ ಅವ್ಯವಹಾರಗಳ ಬಗ್ಗೆ ದಾಖಲೆಗಳ ದೊಡ್ಡ ದೊಡ್ಡ ಕಂತೆ ಸಿಗುತ್ತಿದೆ. ಈ ಎಲ್ಲ ಅವ್ಯವಹಾರದ ವಿರುದ್ಧ ಕ್ರಮ ಕೈಗೊಳ್ಳಲು ಹೋರಾಟ ಮಾಡಲಾಗುವುದು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಬಂಗಾರಪೇಟೆ ತಾಲೂಕು ಡಿಕೆ ಹಳ್ಳಿ ಪಂಚಾಯಿತಿ ವ್ಯಾಪ್ತಿಯ ಆಲದಮರದ ಬಳಿ ಬಿಜೆಪಿ ತಾಲೂಕು ಮಹಿಳಾ ಮೋರ್ಚಾದಿಂದ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಬಂಗಾರಪೇಟೆ ಕ್ಷೇತ್ರದಲ್ಲಿ ಯಾರೂ ಕೇಳುವವರೇ ಇಲ್ಲ ಎಂದು ಸ್ಥಳೀಯ ಶಾಸಕರ ಅಟ್ಟಹಾಸ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಶಾಸಕರನ್ನು ಬದಲಾವಣೆ ಮಾಡುವ ಬಗ್ಗೆ ಕೂಗು ಎದ್ದಿದ್ದು, ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು ಎಂದರು.

ಎಸ್‌ಎನ್ ಸಿಟಿ ಲೇಔಟ್‌ಗೆ ಮುಖ್ಯರಸ್ತೆ ಒತ್ತುವರಿ ಮಾಡಿಕೊಂಡಿರುವುದನ್ನು ಬಿಜೆಪಿ ವಿರೋಧಿಸಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಈ ರಸ್ತೆಯನ್ನು ಬದಲಾವಣೆ ಮಾಡುತ್ತಿದ್ದಾರೆ. ಅಕ್ರಮವಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಳ್ಳದೇ ಇದ್ದಲ್ಲಿ ರಸ್ತೆ ಏಕೆ ಬದಲಾವಣೆ ಮಾಡಬೇಕು ಎಂದರು.

ನಾವ್ಯಾರೂ ಸರ್ಕಾರಿ ಜಮೀನು, ಕೆರೆ-ಕುಂಟೆ, ಬಡವರಿಗೆ ಮಂಜೂರಾಗಿರುವ ಜಮೀನುಗಳನ್ನು ಲಪಟಾಯಿಸಿಲ್ಲ. ಕ್ಷೇತ್ರದಲ್ಲಿ ದುಡ್ಡಿರುವವರು ಹಾಗೂ ಆಯಾ ಪಕ್ಷಕ್ಕಾಗಿ ಶ್ರಮಿಸಿದವರು ಯಾರೂ ಇಲ್ಲವೇ? ಹೊರಗಿನಿಂದ ಅಭ್ಯರ್ಥಿಗಳನ್ನು ಕರೆತಂದು ಚುನಾವಣೆಗೆ ನಿಲ್ಲಿಸುತ್ತಿದ್ದಾರೆ. ಅಭ್ಯರ್ಥಿಗಳಿಗೆ ಏನು ಗೊತ್ತಿಲ್ಲದೇ ಇದ್ದರೂ ಸೀರೆ ಹಂಚಿ ಪರಿಚಯ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾ ಹಾಗೂ ತಾಪಂ ಚುನಾವಣೆ ಇನ್ನೂ ಘೋಷಣೆಯೇ ಆಗಿಲ್ಲ, ಆಗಲೇ ಮತದಾರರಿಗೆ ಸೀರೆ ಹೆಸರಿನಲ್ಲಿ ಆಮಿಷ ಒಡ್ಡುತ್ತಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ನವರು ಯಾವ ರೀತಿ ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಿದ್ದಾರೆ ಎನ್ನುವುದು ಇಡೀ ಕ್ಷೇತ್ರದಲ್ಲಿಯೇ ಮನೆ ಮಾತಾಗಿದೆ ಎಂದರು.

ತಾಲೂಕಿನ ಡಿ.ಕೆ.ಹಳ್ಳಿ ಗ್ರಾಪಂ ಉಪಾಧ್ಯಕ್ಷೆ ರಾಧಮ್ಮ, ಸದಸ್ಯೆ ನಿತ್ಯಾ ಸೇರಿ ಹಲವಾರು ಮಹಿಳೆಯರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಸುಮಾರು 30ಕ್ಕೂ ಹೆಚ್ಚು ಶಿಕ್ಷಕರನ್ನು ಸನ್ಮಾನಿಸಲಾಯಿತು. ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದರೆಡ್ಡಿ, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲರೆಡ್ಡಿ, ಉಪಾಧ್ಯಕ್ಷ ಬಿ.ವಿ.ಮಹೇಶ್, ಬಿ.ಹೊಸರಾಯಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ನಾಗೇಶ್, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಪಿ.ಅಮರೇಶ್, ದ್ರಾಕ್ಷಾರಸ ಮಂಡಳಿ ನಿರ್ದೇಶಕ ಅಭಿಲಾಶ್ ಕಾರ್ತಿಕ್, ಕೆಜಿಎಫ್ ನಗರ ಅಧ್ಯಕ್ಷ ಕಮಲನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net