ಶಾಸಕ ಸ್ಥಾನದಿಂದ ಮುನಿರತ್ನನ್ನು ಕೂಡಲೇ ವಜಾ ಆಗ್ರಹ

ಶಾಸಕ ಸ್ಥಾನದಿಂದ ಮುನಿರತ್ನನ್ನು ಕೂಡಲೇ ವಜಾ ಆಗ್ರಹ
Published on

ಹಾಸನ: ಕ್ರಿಮಿನಲ್ ಹಿನ್ನೆಲೆಯುಳ್ಳ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಿ ಶಾಸಕ ಸ್ಥಾನದಿಂದ ಕೂಡಲೇ ವಜಾ ಮಾಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ದೇವರಾಜೇಗೌಡ ಒತ್ತಾಯಿಸಿದರು.
ಮುನಿರತ್ನ ಗುತ್ತಿಗೆದಾರರನ್ನು ಹಣಕ್ಕಾಗಿ ಪೀಡಿಸಿ, ಅವರ ಕುಟುಂಬದವರ ಹೆಸರು ಬಳಸಿ ಜಾತಿ ನಿಂದನೆ ಮಾಡಿದ್ದಾರೆ. ತುಚ್ಛವಾದ ಪದ ಬಳಸಿ ಸ್ತ್ರೀ ಕುಲಕ್ಕೆ ಅವಮಾನ ಮಾಡಿದ್ದಾರೆ. ಹಣಕ್ಕಾಗಿ ಬಿಜೆಪಿಯವರು ಎಂತಹ ಕೀಳುಮಟ್ಟಕ್ಕಾದರೂ ಇಳಿಯುತ್ತಾರೆ ಎಂಬುದು ಇದರಿಂದ ಸಾಬೀತಾಗಿದೆ. ಮುನಿರತ್ನ ಅವರು ಒಕ್ಕಲಿಗರು ಹಾಗೂ ದಲಿತ ಸಮುದಾಯವನ್ನು ಅವಹೇಳನಕಾರಿಯಾಗಿ ನಿಂದಿಸಿ ಅವಮಾನ ಮಾಡಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಒಕ್ಕಲಿಗ ಸಮುದಾಯದ ಸ್ವಾಮೀಜಿ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಖಂಡಿಸಿದ್ದಾರೆ. ಆದರೆ ಸೋ ಕಾಲ್ಡ್ ಒಕ್ಕಲಿಗರ ನಾಯಕರೆನಿಸಿಕೊಂಡಿರುವ ಆರ್.ಅಶೋಕ್, ಸಿ.ಟಿ.ರವಿ, ಅಶ್ವಥ್ ನಾರಾಯಣ, ಎಚ್.ಡಿ.ಕುಮಾರಸ್ವಾಮಿ, ಪ್ರತಾಪ್ ಸಿಂಹ ಮೊದಲಾದವರು ಖಂಡನೆ ಹೇಳಿಕೆ ನೀಡದೆ, ಮುನಿರತ್ನ ಪರ ವಕಾಲತ್ತು ವಹಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ಬಿಜೆಪಿ ಜೆಡಿಎಸ್ ಮುಖಂಡರಿಗೆ ಆತ್ಮಗೌರವ ಇದ್ದರೆ ಅಪಮಾನ ಹಿನ್ನೆಲೆಯುಳ್ಳ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಕಿತ್ತು ಹಾಕಬೇಕು. ಅಲ್ಲದೆ ಬಿಜೆಪಿಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಘು, ರಂಗಸ್ವಾಮಿ, ದೇವರಾಜು, ತುಳಸೀಪ್ರಸಾದ್, ಹರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net