ಶಾಸಕ ಶಿವಲಿಂಗೇಗೌಡರ ವಿಡಿಯೋ ವೈರಲ್

k m shivlingegowda m l a
Published on

ಅರಸೀಕೆರೆ: ತಾಲೂಕಿನ ಕರಡಿಹಳ್ಳಿಬೋವಿ ಕಾಲನಿ ಗ್ರಾಮದಲ್ಲಿ ಸವಿತಾ ಸಮಾಜದ ಬಗ್ಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಲಘುವಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.


ಬೈಗುಳದ ದೃಶ್ಯಾವಳಿಯ ತುಣುಕು ಮೊಬೈಲ್‌ನಲ್ಲಿ ಹರಿದಾಡುತ್ತಿದ್ದಂತೆಯೇ ಕೆಂಡಮಂಡಲರಾಗಿರುವ ಸಮುದಾಯದ ಮುಖಂಡರಾದ ಅರುಣ್‌ಕುಮಾರ್ ಹಾಗೂ ವಿಜಯಕುಮಾರ್ ಮತ್ತಿತರರು ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಜನಸೇವೆಯೇ ನಮ್ಮ ಆದ್ಯ ಕರ್ತವ್ಯವೆಂದು ಕುಲ ಕಸುಬು ನಡೆಸಿಕೊಂಡು ಬರುತ್ತಿದ್ದೇವೆ. ಸ್ವಾತಂತ್ರ್ಯ ಲಭಿಸಿದ ಬಳಿಕ ಕ್ಷೇತ್ರದ ಹಲವು ಶಾಸಕರು ಶಾಸನಸಭೆ ಪ್ರವೇಶಿಸಿ ತಮ್ಮ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡಿದ್ದಾರೆ.

ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಶಾಸಕರು ಸವಿತಾ ಸಮಾಜಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಅಸಂವಿಧಾನಿಕ ಪದ ಬಳಸಿ ದರ್ಪದ ನಡವಳಿಕೆ ಪ್ರದರ್ಶಿಸಿದ್ದಾರೆ. ಇಂತಹ ಉದ್ಧಟತನದ ಮಾತುಗಳನ್ನಾಡಿರುವ ಶಾಸಕರು ತಕ್ಷಣವೇ ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಅವರ ನಿವಾಸದ ಎದುರು ಪ್ರತಿಭಟನೆ ನಡೆಸುವ ಜತೆಗೆ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕ್ಷಮೆಯಾಚನೆ: ಪರಿಸ್ಥಿತಿ ಕೈಮೀರುತ್ತಿದೆ ಎಂಬುದನ್ನು ಅರಿತ ಶಾಸಕ ಕೆ.ಎಂ.ಶಿವಲಿಂಗೇಗೌಡ ತಡಮಾಡದೆ ಕ್ಷಮೆಯಾಚನೆ ಮಾಡಿರುವ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸವಿತಾ ಸಮಾಜದ ನಂಟನ್ನು ಎಂದಿಗೂ ಮರೆಯಲಾರೆ. ಮಾತಿನ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಸಂವಿಧಾನಿಕ ಪದ ಬಳಕೆ ಮಾಡಿದ್ದು, ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ನಿಮ್ಮಗಳ ಮನಸ್ಸಿಗೆ ನೋವಾಗಿದ್ದು, ಎಲ್ಲರ ಕ್ಷಮೆ ಕೋರುವುದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net