ಶಾಸಕ ರಘುಮೂರ್ತಿ ನಾಮಪತ್ರ ತಿರಸ್ಕೃತ

CTD DCC BANK
Published on

ಚಿತ್ರದುರ್ಗ: ಮಂತ್ರಿ, ಕಾಂಗ್ರೆಸ್ ಶಾಸಕ ಸಹಿತ ನಾನಾ ಧುರೀಣರು ಕಣದಲ್ಲಿರುವ ಜಿಲ್ಲಾ ಸಹಕಾರಿ ಬ್ಯಾಂಕ್ ಚುನಾವಣೆ ಫಲಿತಾಂಶ ಸಹಕಾರಿ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಶುಕ್ರವಾರ ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯದ ಬೆನ್ನಲ್ಲೇ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೇರಿ 6 ಜನರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದಾಗಿರುವ ಅವಿರೋಧ ಆಯ್ಕೆ ಘೋಷಣೆ ತಡೆ ಹಿಡಿಯಲಾಗಿದೆ.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಎಂ.ಕಾರ್ತಿಕ್ ತಿರಸ್ಕರಿಸಿದ್ದಾರೆ. ಹೈಕೋರ್ಟ್ ಸೆ.9ರಂದು ಹೊರಡಿಸಲಿರುವ ಆದೇಶದ ಷರತ್ತಿಗೆ ಒಳಪಟ್ಟು ಅವರ ನಾಮಪತ್ರ ತಿರಸ್ಕರಿಸಲಾಗಿದೆ. ರಘುಮೂರ್ತಿ ಅವರೊಂದಿಗೆ, ಚಿತ್ರದುರ್ಗ ತಾಲೂಕು ಫ್ಯಾಕ್ಸ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಪಿ.ಮಂಜುನಾಥ್, ಅರುಣ್‌ಕುಮಾರ್ ಹಾಗೂ ಹಾಲು ಸಹಕಾರ ಸಂಘಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿ.ಎಸ್.ಶಶಿಧರ್ ಅವರ ನಾಮಪತ್ರಗಳು ಕೂಡ ತಿರಸ್ಕೃತವಾಗಿವೆ. ಆದರೆ, ಈ ಎಲ್ಲ ನಾಲ್ವರ ನಾಮಪತ್ರಗಳ ತಿರಸ್ಕಾರದ ಕ್ರಮ ಕೋರ್ಟ್ ತೀರ್ಪಿನ ಷರತ್ತಿಗೆ ಒಳಪಟ್ಟಿರುತ್ತದೆ.
ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ರಾಮರೆಡ್ಡಿ ನಾಮಪತ್ರ ತಿರಸ್ಕೃತವಾಗಿದೆ. ಆದರೆ, ರಾಮರೆಡ್ಡಿ ಅನರ್ಹ ಮತಪಟ್ಟಿ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿಲ್ಲ. ಆದ್ದರಿಂದ ಷರತ್ತಿಲ್ಲದೆ ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಹಾಲಿನ ಸಹಕಾರ ಕ್ಷೇತ್ರದಿಂದ ತಿಪ್ಪೇಸ್ವಾಮಿ ಅವರು ಅವಿರೋಧ ಆಯ್ಕೆಯಾಗಿದ್ದರೂ ಫಲಿತಾಂಶ ಘೋಷಣೆಯಾಗಿಲ್ಲ. ಕಾರಣ ಇದೇ ಕ್ಷೇತ್ರದಿಂದ ಡಿ.ಎಸ್.ಶಶಿಧರ್ ಕೂಡ ನಾಮಪತ್ರ ಸಲ್ಲಿಸಿದ್ದು, ಅನರ್ಹತೆ ವಿಚಾರ ಕೋರ್ಟಿನಲ್ಲಿದೆ. ಕೋರ್ಟ್ ಆದೇಶ ಬಳಿಕ ನಿರ್ಧಾರವಾಗಬೇಕಿದೆ.
ಡಿಸಿಸಿ ಬ್ಯಾಂಕ್ 12 ನಿರ್ದೇಶಕರ ಸ್ಥಾನಗಳಿಗೆ ಸೆ.12ರಂದು ಚುನಾವಣೆ ಘೋಷಣೆಯಾಗಿತ್ತು. ಆಗಸ್ಟ್ 29ರಿಂದ ಸೆ.4ರ ವರೆಗೆ ನಾಮಪತ್ರ ಸಲ್ಲಿಕೆ, 5ರಂದು ಪರಿಶೀಲನೆ, ಅಭ್ಯರ್ಥಿಗಳ ಪಟ್ಟಿ ಹಾಗೂ 6ರಂದು ನಾಮಪತ್ರ ಹಿಂತೆಗೆತಕ್ಕೆ ಅವಕಾಶ, ಅವಧಿ ಪೂರ್ಣಬಳಿಕ ಅರ್ಹ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆಯಾಗಿದೆ. 12 ಸ್ಥಾನಗಳಿಗೆ 53 ನಾಮಪತ್ರಗಳು ಸಲ್ಲಿಕೆಯಾಗಿದ್ದವು.
*ಯಾವ ಕ್ಷೇತ್ರ,ಎಷ್ಟು ನಿರ್ದೇಶಕರು?: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಎ ವರ್ಗದಿಂದ 6 ತಾಲೂಕುಗಳಿಂದ ತಲಾ ಒಬ್ಬರು, ಬಿ ವರ್ಗ-ಟಿಎಪಿಸಿಎಂಗಳಿಂದ ಜಿಲ್ಲೆಗೆ ಒಬ್ಬರು, ಸಿ ವರ್ಗ-ಪಟ್ಟಣ ಸಹಕಾರ ಬ್ಯಾಂಕ್ ಮತ್ತು ವ್ಯವಸಾಯೇತರ ಪತ್ತಿನ ಸಂಘಗಳಿಂದ ಜಿಲ್ಲೆಗೆ ಒಬ್ಬರು, ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಡಿ ವರ್ಗದಿಂದ ಹಾಗೂ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ತಾಲೂಕಿಗಳಿಂದ ತಲಾ ಒಬ್ಬೊಬ್ಬರು, ನೇಕಾರಿಕೆ ಸಹಕಾರ ಸಂಘಗಳ ಇ ವರ್ಗದಿಂದ ಜಿಲ್ಲೆಗೆ ಒಬ್ಬರು ಹಾಗೂ ಇತರೆ ಸಹಕಾರ ಸಂಘಗಳಿಂದ ಜಿಲ್ಲೆಗೆ ಒಬ್ಬರಂತೆ 12 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು.
5 ಅಥವಾ 6 ಸ್ಥಾನಗಳಿಗೆ 12ರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಅಂದು ಸಂಜೆಯೇ ಮತ ಎಣಿಕೆ ನಡೆದು ಫಲಿತಾಂಶ ಘೋಷಿಸಲಾಗುತ್ತಿದ್ದು, ಡಿಸಿಸಿ ಬ್ಯಾಂಕ್ ಸ್ವಪಕ್ಷೀಯ ನಡುವಿನ ಗದ್ದುಗೆ ಪೈಪೋಟಿಗೆ ಈಗ ಕೋರ್ಟ್ ತೀರ್ಪು ಆಧಾರವಾಗಿದೆ.

*ಯಾವ ಕ್ಷೇತ್ರದಿಂದ ಯಾರು ಅವಿರೋಧ?
ಚಳ್ಳಕೆರೆ ತಾಲೂಕು-ಡಿ.ಸುಧಾಕರ್, ಹೊಳಲ್ಕೆರೆ-ಎಸ್.ಆರ್.ಗಿರೀಶ್, ಹಿರಿಯೂರು- ಒ.ಮಂಜುನಾಥ್, ಟಿಎಪಿ ಸಿಎಂಎಸ್-ಎಚ್.ಬಿ.ಮಂಜುನಾಥ್, ನೇಕಾರಿಕೆ ಸಹಕಾರ ಸಂಘ-ಕೆ.ಜಗಣ್ಣ, ಪಟ್ಟಣ ಸಹಕಾರ ಬ್ಯಾಂಕ್ ಕ್ಷೇತ್ರದಿಂದ ರಘುರಾಮರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆರು ನಿರ್ದೇಶಕರ ಅವಿರೋಧ, ಮತ್ತೊಬ್ಬರ ಫಲಿತಾಂಶ ತಡೆಹಿಡಿಯಲಾಗಿದೆ.

*ಅಂತಿಮವಾಗಿ ಕಣದಲ್ಲಿ
ಎ-ಕ್ಷೇತ್ರ-ಎಚ್.ಬಸವರಾಜ್, ಕೆ.ಅನಂತ್, ಎಚ್.ಎಂ.ದ್ಯಾಮಣ್ಣ, ಟಿ.ಪಿ.ಅನೂಪ್, ಬಿ.ಮಂಜುನಾಥ್, ಎಚ್.ಟಿ.ನಾಗರೆಡ್ಡಿ, ಜಿ.ಬಸವರಾಜ, ಡಿ.ಕ್ಷೇತ್ರ-ಪಿ.ವಿನೋದಸ್ವಾಮಿ, ಎಂ.ಭಾರತಿ.

(ಮಗ್‌ಶಾಟ್)
ಡಿ.ಸುಧಾಕರ್
ಟಿ.ರಘುಮೂರ್ತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net