ಶಾಸಕ ಯತ್ನಾಳ‌ ಹೇಳಿಕೆಗೆ ಪಟ್ಟಣಶೆಟ್ಟಿ ವ್ಯಂಗ್ಯ, ಗಣೇಶೋತ್ಸವಕ್ಕೆ ಸರ್ಕಾರ‌ ಅನುಮತಿ ನೀಡುವ ವಿಶ್ವಾಸ ಇದೆ, ಗುಂಡು ಹೊಡೆಸಿಕೊಳ್ಳುವ ಅವಶ್ಯಕತೆ ಇಲ್ಲ !

20210825_102412
Published on

ವಿಜಯಪುರ: ಗಜಾನನ ಉತ್ಸವಕ್ಕೆ ಮಹಾಮಂಡಳ ಸಕಲ‌ ರೀತಿ ಸಿದ್ದತೆ ಮಾಡಿಕೊಂಡಿದ್ದು ಯಾವುದೇ ಕಾರಣಕ್ಕೂ ಉತ್ಸವ ನಿಲ್ಲುವುದಿಲ್ಲ. ಸರ್ಕಾರ ಸಹ ಪರವಾನಿಗೆ ನೀಡುವ ವಿಶ್ವಾಸವಿದೆ. ಅದಕ್ಕಾಗಿ ಗುಂಡು ಹೊಡೆಸಿಕೊಳ್ಳುವ ಅಗತ್ಯವಿಲ್ಲ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಹೇಳಿಕೆಗೆ ವ್ಯಂಗ್ಯವಾಡಿದರು..

ಈಗಾಗಲೇ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಮಾಡಿದ್ದು, ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ಕಲ್ಪಿಸಲು ತಿಳಿಸಲಾಗಿದೆ. ಸರ್ಕಾರ ಅನುಮತಿ‌ ನೀಡುವ ವಿಶ್ವಾದ ಇದೆ. ಸಿಎಂ ಬಸವರಾಜ ಬೊಮ್ಮಾಯಿ‌ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.‌ಅನವಶ್ಯಕವಾಗಿ ಯುವಕರನ್ನು ಪ್ರಚೋದನೆ ನೀಡುವ ಅವಶ್ಯಕತೆ ಇಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕರೊನಾ ಮಾರ್ಗಸೂಚಿ ಅನುಸರಿಸಿಯೇ ಉತ್ಸವ ಆಚರಿಸಲಾಗುವುದು. ಗಜಾನನ ಮಂಡಳಗಳು ಗೊಂದಲಕ್ಕೆ ಈಡಾಗುವ ಅಗತ್ಯವಿಲ್ಲ. ಉತ್ಸವ ಅಚರಣೆಗೆ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಿ‌ ಎಂದರು.

ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಮಹಾರಾಷ್ಟ್ರ ಮೀರಿಸುವ ರೀತಿ ವಿಜಯಪುರದಲ್ಲಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಸಾಕಷ್ಟು ಜನ ಉತ್ಸವ ನೋಡಲು ಬರುತ್ತಿದ್ದಾರೆ. ರಾಜಕೀಯ ಮಾಡಲು, ಮಜಾ ಮಾಡಲು ಗಜಾನನ ಮಂಡಳ ರಚನೆಯಾಗಿಲ್ಲ. ಯುವಕರಲ್ಲಿ ಜಾಗೃತಿ ಮೂಡಿಸಲು, ಧಾರ್ಮಿಕ ಹಾಗೂ ರಾಷ್ಟ್ರೀಯ ಭಾವನೆ ಬೆಳೆಸಲು ಗಜಾನನ ಮಂಡಳ ಗಣೇಶೋತ್ಸವ ದ ಮೂಲಕ ಶ್ರಮಿಸುತ್ತಿದೆ. ಇಂಥ ಹಬ್ಬಕ್ಕೆ ಕಡಿವಾಣ ಹಾಕುವುದು ಸರಿಯಲ್ಲ ಎಂದರು.

ಆರಂಭದಿಂದಲೇ ಗಜಾನನ ಮಹಾ ಮಂಡಳ ಗಣೇಶೋತ್ಸವ ಆಚರಣೆಗೆ ಮನವಿ ಸಲ್ಲಿಸುತ್ತಾ ಬರಲಾಗಿದೆ. ಇದೀಗ ನಗರ ಶಾಸಕರು ಗುಂಡು ಹಾಕಿದರೂ ಗಣೇಶೋತ್ಸವ ಆಚರಿಸುತ್ತೇವೆಂದು ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೂ ಮೊದಲೇ

ಸಿಎಂ ವಿಜಯಪುರಕ್ಕೆ ಬಂದಾಗ ನಾನು ಮನವಿ ಸಲ್ಲಿಸಿದ್ದೇನೆ. ಅವರು ಕೂಡ ಅನುಮತಿ ನೀಡುವುದಾಗಿ ಭರವಸೆ ನೀಡಿದ್ದಾಗಿ ತಿಳಿಸಿದರು.

ಇನ್ನೂ 15 ದಿನ ಸಮಯ ಇದೆ. ಅಷ್ಟರಲ್ಲಿ ಪೂರಕ ಆದೇಶ ಬರುವ ನಿರೀಕ್ಷೆ ಇದೆ. ಬರದೇ ಇದ್ದರೂ ಉತ್ಸವ ನಿಲ್ಲುವುದಿಲ್ಲ ಎಂದರು.

ಕಳೆದ ವರ್ಷ ಎಲ್ಲಿದ್ದರು ಇವರು. ಗುಂಡು ಯಾಕೆ ಹೊಡೆಸಿಕೊಳ್ಳಲಿಲ್ಪ. ಎರಡ್ಮೂರು ವರ್ಷ ಎಲ್ಲಿದ್ದರೋ‌ ಗೊತ್ತಿಲ್ಲ. ಈಗ ಹಣ ನೀಡಲು ಬಂದಿದ್ದಾರೆ. ಚುನಾವಣೆ ಸಮೀಪ‌ ಬಂದಾಗ ಇದೆಲ್ಲಾ ಮಾಡಬೇಕಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ ಚಾಟಿ ಬೀಸಿದರು.

ಶಿವಾನಂದ ಮಾನಕರ, ಪ್ರಭಾಕರ ಬೋಸ್ಲೆ, ವಿಜಯಕುಮಾರ ಕೋವಳ್ಳಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net