

ಯಳಂದೂರು: ಮತಯಾಚನೆ ಸಂದರ್ಭದಲ್ಲಿ ಗ್ರಾಮಕ್ಕೆ ಬಂದಿದ್ದು ಬಿಟ್ಟರೆ ಗೆದ್ದ ಬಳಿಕ ಒಂದು ಬಾರಿಯೂ ಗ್ರಾಮಕ್ಕೆ ಭೇಟಿ ನೀಡದೆ, ನಯಾ ಪೈಸೆ ಅನುದಾನವನ್ನೂ ನೀಡದೆ ಮೋಸ ಮಾಡಿದ್ದೀರಿ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರನ್ನು ಬೂದಿತಿಟ್ಟು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಸುವರ್ಣಾವತಿ ನದಿಯ ಪ್ರವಾಹ ಪೀಡಿತ ಗ್ರಾಮಗಳಿಗೆ ಮಂಗಳವಾರ ಸಂಜೆ ಭೇಟಿ ನೀಡಿದ್ದರು. ಬೂದಿತಿಟ್ಟು ಗ್ರಾಮಕ್ಕೆ ಬಂದಾಗ, ಚುನಾವಣೆಗೆ ಮೊದಲು ಅಭಿವೃದ್ಧಿ ಬಗ್ಗೆ ನೀಡಿದ್ದ ಆಶ್ವಾಸನೆ ಈಡೇರಿಸಿಲ್ಲ. ಗ್ರಾಮಕ್ಕೆ ಶಾಸಕರ ಅನುದಾನದಿಂದ ಯಾವುದೇ ಕೆಲಸ ಮಾಡಿಲ್ಲ. ಮದ್ದೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಹಲವು ಬಾರಿ ಮನವಿ ಮಾಡಿದರೂ ಗಮನ ನೀಡಿಲ್ಲ ಎಂದು ಗ್ರಾಮಸ್ಥರು ಶಾಸಕರನ್ನು ತರಾಟೆಗೆ ತಗೆದುಕೊಂಡರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಎನ್.ಮಹೇಶ್, ಈಗ ಸುವರ್ಣಾವತಿ ಹೊಳೆಯಲ್ಲಿ ಪ್ರವಾಹ ಬಂದಿದ್ದು, ಮೊದಲು ಪ್ರವಾಹ ಪೀಡಿತ ಪ್ರದೇಶಗಳ ಸಮಸ್ಯೆ ಬಗೆಹರಿಸುವ ತುರ್ತು ಇದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಸಮಸ್ಯೆಯನ್ನು ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿ, ಅಲ್ಲಿಂದ ತೆರಳಿದರು. ಕೆಸ್ತೂರು ಗ್ರಾಮದಲ್ಲಿ ರಾಜಕಾಲುವೆ ಹೂಳು ತೆಗೆಸಿಲ್ಲ. ಚುನಾವಣೆ ಸಮಯದಲ್ಲಿ ಕೊಟ್ಟಿದ್ದ ಆಶ್ವಾಸನೆಯನ್ನು ಶಾಸಕರು ಈಡೇರಿಸಿಲ್ಲ ಎಂದು ಗ್ರಾಮಸ್ಥರು ಘೇರಾವ್ ಮಾಡಿದರು. ನಂತರ ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದರು.