ಶಾಸಕ ಬಿ.ನಾರಾಯಣರಾವ್ ಅಂತ್ಯಸಂಸ್ಕಾರ

b.narayanra
Published on

ಬೀದರ್: ಗುರುವಾರ ಕೊನೆಯುಸಿರೆಳೆದಿದ್ದ ಶಾಸಕ ಬಿ.ನಾರಾಯಣರಾವ್ ಅವರ ಅಂತ್ಯಸಂಸ್ಕಾರ ಬಸವಕಲ್ಯಾಣ ನಗರದ ಹೊರವಲಯದ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಜಾಗೃತಿ ಆಶ್ರಮ ಪಕ್ಕದಲ್ಲಿರುವ ಖಾಸಗಿ ಲೇಔಟ್ ನಲ್ಲಿ ಕೋಲಿ/ಕಬ್ಬಲಿಗ ಸಮಾಜದ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಶುಕ್ರವಾರ ನಡೆಯಿತು.

ಕರೊನಾದಿಂದ ಬಳಲುತ್ತಿದ್ದ ನಾರಾಯಣರಾವ್ ಅವರು ಗುರುವಾರ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಆಂಬುಲೆನ್ಸ್ ನಲ್ಲಿ ಶುಕ್ರವಾರ ಮಧ್ಯಾಹ್ನ ಬಸವಕಲ್ಯಾಣಕ್ಕೆ ಪಾರ್ಥಿವ ಶರೀರ ತರಲಾಯಿತು. ಸಕಲ ಸರ್ಕಾರಿ ಗೌರವದೊಂದಿಗೆ ಅಗಲಿದ ನಾಯಕನಿಗೆ ಅಶ್ರುತರ್ಪಣ ಮಧ್ಯೆ ಅಂತಿಮ ವಿದಾಯ ಸಲ್ಲಿಸಲಾಯಿತು.

ನೇರವಾಗಿ ಅಂತ್ಯಕ್ರಿಯೆ ಸ್ಥಳಕ್ಕೆ ಮೃತದೇಹ ರವಾನಿಸಿ, ಕೋವಿಡ್ ನಿಯಮದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಹಾರಕೂಡದ ಶ್ರೀ ಚೆನ್ನವೀರ ಶಿವಾಚಾರ್ಯ, ಭಾಲ್ಕಿ ಹಿರೇಮಠದ ಶ್ರೀ ಗುರುಬಸವ ಪಟ್ಟದ್ದೇವರು, ಮಾಜಿ ಸಚಿವರಾದ ಯು.ಟಿ ಖಾದರ್, ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ್, ಬಂಡೆಪ್ಪ ಖಾಶೆಂಪುರ, ಕಲಬುರಗಿ ಸಂಸದ ಉಮೇಶ ಜಾಧವ್, ಬೀದರ್ ಸಂಸದ ಭಗವಂತ ಖೂಬಾ, ಎಂಎಲ್ಸಿ ವಿಜಯಸಿಂಗ್, ಡಾ. ಚಂದ್ರಶೇಖರ ಪಾಟೀಲ್, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಡಿಸಿ ರಾಮಚಂದ್ರನ್, ಎಸ್ಪಿ ಬನಾಗೇಶ ಸೇರಿದಂತೆ ಅನೇಕರಿಂದ ಅಂತಿಮ ನಮನ ಸಲ್ಲಿಸಲಾಯಿತು.

ಕೋವಿಡ್ ನಿಯಮದ ಪ್ರಕಾರ ಅಭಿಮಾನಿಗಳಿಗೆ ಪಾರ್ಥಿವ ಶರೀರದ ಹತ್ತಿರ ಪೊಲೀಸರು ಬಿಡಲಿಲ್ಲ. ದೂರದಿಂದಲೇ ನೆಚ್ಚಿನ ನಾಯಕನಿಗೆ ಅಭಿಮಾನಿಗಳು ಅಂತಿಮ ವಿದಾಯ ಹೇಳಿದರು. ಅನೇಕರು ಕಣ್ಣೀರಿಟ್ಟು ಅಗಲಿದ ನಾಯಕನಿಗೆ ವಿದಾಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net