

ಹಾಸನ : ಹಾಸನ ಜಿಲ್ಲೆಯಲ್ಲಿ ಚುನಾವಣೆ ಕಾವು ರಂಗೇರುತ್ತಿದ್ದು ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡರಿಂದ ಮತದಾರರಿಗೆ ಭರಪೂರ ಉಡುಗೊರೆ ನೀಡಲಾಗುತ್ತಿದೆ.
ಅಷ್ಟಲಕ್ಷ್ಮಿ ಪೂಜೆ ಹೆಸರಿನಲ್ಲಿ ಕ್ಷೇತ್ರದ ಮಹಿಳೆಯರಿಗೆ ಬಾಗಿಣ ರೂಪದಲ್ಲಿ ಸೀರೆ, ಬೆಳ್ಳಿಯ ದೇವರ ಫೋಟೋ ಹಂಚುತ್ತಿದ್ದಾರೆ. ಮಹಿಳೆಯರಿಗೆ ಉಡುಗೊರೆ ಹಂಚುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಲ್ಲದೇ ಬಿಜೆಪಿ ಕಚೇರಿ ಬಳಿ ಗಿಫ್ಟ್ ಪಡೆಯಲು ಜನರು ಮುಗಿಬಿದ್ದಿದ್ದು, ಗಿಫ್ಟ್ ಪಡೆದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.ಇದು ಕ್ಷೇತ್ರದಲ್ಲಿ ಬಾರಿ ಸಂಚಲನ ಮೂಡಿಸಿದೆ.
ಚುನಾವಣೆ ಘೋಷಣೆಯಾದರೆ ನೀತಿ ಸಂಹಿತೆ ಅಡ್ಡಿಯಾಗುವ ಕಾರಣಕ್ಕೆ ಪ್ರತಿದಿನ ಒಂದೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಉಡುಗೊರೆ ನೀಡಲಾಗುತ್ತಿದೆ. ಈ ಹಿಂದೆಯೂ ಗೌರಿ ಹಬ್ಬದ ಸಂದರ್ಭದಲ್ಲಿ ಮಹಿಳೆಯರಿಗೆ ಸೀರೆ, ಬಳೆ, ಕುಂಕುಮ, ಪುರುಷರಿಗೆ ಪಂಚೆ, ಶರ್ಟ್ ಅನ್ನು ಶಾಸಕ ಪ್ರೀತಂ ಗೌಡ ಉಡುಗೊರೆಯಾಗಿ ನೀಡಿದ್ದರು.
ಇದೀಗ ಚುನಾವಣೆ ಹೊಸ್ತಿಲಲ್ಲಿ ಮತದಾರರನ್ನು ಓಲೈಸಲು ಪ್ರೀತಂ ಗೌಡ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.