ಶಾಸಕ ಪ್ರೀತಂ ಗೌಡ ಬಹಿರಂಗ ಕ್ಷಮೆಯಾಚಿಸಬೇಕು ; ಬೃಹತ್ ಪ್ರತಿಭಟನೆ

ಶಾಸಕ ಪ್ರೀತಂ ಗೌಡ ಬಹಿರಂಗ ಕ್ಷಮೆಯಾಚಿಸಬೇಕು ; ಬೃಹತ್ ಪ್ರತಿಭಟನೆ
Published on

ಹಾಸನ: ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅವಹೇಳನಕಾರಿ ಆಗಿ ಮಾತನಾಡಿರುವ ಶಾಸಕ ಪ್ರೀತಂಗೌಡ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಮಹಿಳೆಯರು ಸೇರಿದಂತೆ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.


ಬೆಳಗ್ಗೆ 11.30 ರ ಸುಮಾರಿಗೆ ನೇರವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಸೇರಿದ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಶಾಸಕ ಪ್ರೀತಂಗೌಡ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಹಲವು ಮುಖಂಡರು, ಶಾಸಕರ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಕೂಡಲೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.


ಹಿರಿಯ ಮುಖಂಡ ಕೆ.ಎಂ. ರಾಜೇಗೌಡ ಮಾತನಾಡಿ, ಶಾಸಕರು ಮಾತನಾಡಿರುವ ರೀತಿ ಅವರಿಗೆ ಶೋಭೆ ತರುವುದಿಲ್ಲ. ಜನಪ್ರತಿನಿಧಿಗಳನ್ನು ಜನರು ಅನುಕರಣೆ ಮಾಡುತ್ತಾರೆ. ಹೀಗಾಗಿ ಜವಾಬ್ದಾರಿ ಸ್ಥಾನದಲ್ಲಿರುವವರ ನಡವಳಿಕೆ ಸರಿ ಇರಬೇಕು. ಆದರೆ ಪ್ರೀತಂಗೌಡ ಅವರಂಥವರು ಶಾಸಕರಾಗಿರುವುದು ನಮ್ಮ ದೌರ್ಭಾಗ್ಯ. ನೀವು ಆಡಿರುವ ಮಾತುಗಳ ಬಗ್ಗೆ ನಿಮ್ಮ ತಾಯಿ, ಅಕ್ಕ-ತಂಗಿ ಹಾಗೂ ಪತ್ನಿಯನ್ನು ಕೇಳಿ, ಇಂಥ ನೀಚ ಭಾಷೆ ಮೂಲಕ ನೀವು ದೊಡ್ಡ ನಾಯಕ ಆಗುವೆ ಎಂದುಕೊಂಡಿರುವುದು ನಿಮ್ಮ ತಪ್ಪು. ಇದು ಬಿಜೆಪಿ ಸಂಸ್ಕೃತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಮಾಜಿ ಶಾಸಕ ಬಿ.ವಿ.ಕರೀಗೌಡ ಮಾತನಾಡಿ, ಪ್ರೀತಂಗೌಡ ಏನು ಅನ್ನೋದು ಜಿಲ್ಲೆಯ ಜನರಿಗೆ ಗೊತ್ತಾಗಿದೆ. ಇವರಿಗೆ ಆಚಾರ ಇಲ್ಲ, ನೀಚ ಬುದ್ಧಿ ಇದೆ. ಹಿಂದೆಲ್ಲಾ ಶಾಸಕರನ್ನು ಗೌರವದಿಂದ ಕಾಣುತ್ತಿದ್ದರು. ಆದರೆ ಇವರೇ ಹಾರ ಕೊಟ್ಟು ಹಾಕಿಸಿಕೊಳ್ಳುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂದು ಜರಿದರು.


ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಮಾತನಾಡಿ, ವಿನೇಶಕಾಲೇ ವಿಪರೀತ ಬುದ್ಧಿ ಅನ್ನೋ ಹಾಗೆ, ಶಾಸಕರು ವರ್ತಿಸುತ್ತಿದ್ದಾರೆ. ನಿಮ್ಮ ಮಾತಿನಿಂದ ನೀವು ಮಹಿಳೆಯರಿಗೆ ಯಾವ ರೀತಿಯ ಗೌರವ ಕೊಡುತ್ತೀರಿ ಎಂಬುದು ತಿಳಿದಂತಾಗಿದೆ. ಕೂಡಲೇ ಶಾಸಕರು ಭವಾನಿ ರೇವಣ್ಣ ಹಾಗೂ ಸಮಸ್ತ ಮಹಿಳಾ ಸಮುದಾಯದ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.


ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್. ದ್ಯಾವೇಗೌಡ, ಮೊದಲಾದವರು ಮಾತನಾಡಿ, ರೇವಣ್ಣ ಅವರ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಅದಾವುದನ್ನೂ ಮಾಡದ ಶಾಸಕರು, ಅಧಿಕಾರದ ಮದದಲ್ಲಿ ಹೆಣ್ಣು ಮಕ್ಕಳ ತೇಜೋವಧೆ, ಅವರ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದರು.


ವಕೀಲೆ ಸುಮಾ ಮಾತನಾಡಿ, ದೇವೇಗೌಡರ ಮನೆ ಸೊಸೆ ಆಗುವ ಮುನ್ನ ಭವಾನಿ ಅವರ ಆಸ್ತಿ ಎಷ್ಟಿತ್ತು ಎಂಬುದಾಗಿ ಶಾಸಕ ಪ್ರೀತಂಗೌಡ ಟೀಕಿಸಿದ್ದಾರೆ. ಭವಾನಿ ಅವರ ಕುಟುಂಬದ ಬಗ್ಗೆ ಮಾತನಾಡುವ ಯೋಗ್ಯತೆ ಪ್ರೀತಂಗೌಡರಿಗಿಲ್ಲ. ಭವಾನಿ ಅವರ ಕುಟುಂಬದವರು 1964 ರಲ್ಲೇ ರೈಸ್ ಮಿಲ್ ಪ್ರಾರಂಭಿಸಿದ್ದರು, 1970 ರಲ್ಲೇ ಆರ್‌ಸಿಸಿ ಮನೆ ಕಟ್ಟಿದ್ದರು. ಆಸ್ತಿ ಇಲ್ಲದೆ ಇಷ್ಟೆಲ್ಲಾ ಮಾಡಲು ಸಾಧ್ಯವೇ? ಅವರು ನಿರ್ಮಿಸಿರುವ ಕಲ್ಯಾಣ ಮಂಟಪಗಳನ್ನು ಬಡವರಿಗೆ ಉಚಿತವಾಗಿ ಕೊಡುತ್ತಾರೆ. ಇದೆಲ್ಲಾ ತಿಳಿದು ಮಾತನಾಡಿ ಎಂದು ಕಿಡಿಕಾರಿದರು.


ಪ್ರತಿಭಟನೆಯಲ್ಲಿ ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ, ಜಿಪಂ ಮಾಜಿ ಸದಸ್ಯೆ ಉಜ್ಮಾ ರಿಜ್ವಿ, ಮುಖಂಡರಾದ ಎಂ.ಎ. ನಾಗರಾಜ್, ಕಣದಹಳ್ಳಿ ಮಂಜೇಗೌಡ, ಸ್ವಾಮಿಗೌಡ, ಬಿದರೆಕೆರೆ ಜಯರಾಂ, ಶ್ರೀಕಾಂತ್ ಚೆನ್ನಂಗಿಹಳ್ಳಿ, ಪ್ರಸಾದ್ ಗೌಡ, ನಗರಸಭೆ ಸದಸ್ಯರಾದ ಸಿ.ಆರ್. ಶಂಕರ್, ಚಂದ್ರೇಗೌಡ, ಮಂಜಣ್ಣ, ವಾಸುದೇವ್ ಮತ್ತಿತರರು ಭಾಗವಹಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net