

ನಾಪೋಕ್ಲು: ಕೊಡಗಿನ ಸಂಸ್ಕೃತಿ ಕ್ರೀಡೆ ಹಾಗೂ ಇತಿಹಾಸವನ್ನು ಪೋಷಿಸಿ ಬೆಳೆಸಲು ಸದಾ ಸಿದ್ಧ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ಸಮೀಪದ ಕೊಳಕೇರಿ ಗ್ರಾಮದ ಕುಂಡ್ಯೋಳಂಡ ಮನೆಯ ಮುಖ್ಯಸ್ಥರ ಕೋರಿಕೆ ಮೇರೆಗೆ ಶನಿವಾರ ಸಂಜೆ ಕುಂಡ್ಯೋಳಂಡ ಐನ್ ಮನೆಯಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡು ಕುಟುಂಬಸ್ಥರ ಆತಿಥ್ಯವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಕೊಡವ ಜನಾಂಗದ ಆಚಾರ, ವಿಚಾರ, ಸಂಸ್ಕೃತಿ ವಿಭಿನ್ನವಾಗಿದೆ. ಅದರೊಂದಿಗೆ ಹಾಕಿಕ್ರೀಡೆ ಮಹತ್ವ ಹೊಂದಿದೆ. ಮುಂದಿನ ಸಾಲಿನಲ್ಲಿ ನಡೆಯುವ ಹಾಕಿ ಉತ್ಸವದ ಯಶಸ್ಸಿಗೆ ಸಕಲ ಸಹಕಾರ ನೀಡುವುದಾಗಿ ತಿಳಿಸಿದರು.
2024ರಲ್ಲಿ ಜರುಗಿದ ಕುಂಡ್ಯೋಳಂಡ ಕಪ್ ಹಾಕಿ ನಮ್ಮೆ ಅಭೂತಪೂರ್ವ ಯಶಸ್ಸು ಕಂಡಿತ್ತು. ಈ ಯಶಸ್ಸಿನ ಹಿಂದೆ ಎ.ಎಸ್.ಪೊನ್ನಣ್ಣ ಅವರ ಕೊಡುಗೆ ಬಹು ದೊಡ್ಡದು. ಕುಂಡ್ಯೋಳಂಡ ಕುಟುಂಬಸ್ಥರ ಕೋರಿಕೆ ಮೇರೆಗೆ ಶಾಸಕರು ಈ ಹಾಕಿ ಪಂದ್ಯಕ್ಕೆ ವಿಶೇಷ ಅನುದಾನ ಒದಗಿಸುವಲ್ಲಿ ಶ್ರಮಿಸಿದರು. ಶಾಸಕರ ಈ ಪ್ರಯತ್ನಕ್ಕೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಲು ಕುಂಡ್ಯೋಳಂಡ ಕುಟುಂಬಸ್ಥರು ಈ ವಿಶೇಷ ಔತಣ ಕೂಟವನ್ನು ಆಯೋಜಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
ಪೊನ್ನಣ್ಣ ಅವರ ಪತ್ನಿ ಕಾಂಚನ್ ಪೊನ್ನಣ್ಣ, ಬೊಟ್ಟಕಾಳಂಡ ಮುತ್ತಣ್ಣ, ಕುಂಡ್ಯೋಳಂಡ ಕುಟುಂಬದ ಪಟ್ಟೆದಾರ ಚುಬ್ಬಣಿ ಸುಬ್ಬಯ್ಯ, ಲಲಿತಾ ಚಿಣ್ಣಪ್ಪ, ರಮೇಶ್ ಮುದ್ದಯ್ಯ, ದಿನೇಶ್ ಕಾರ್ಯಪ್ಪ, ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಪಾಲ್ಗೊಂಡಿದ್ದರು.