

ಮೈಸೂರು: ಶಾಸಕ ಕೆ.ಹರೀಶ್‌ಗೌಡ ಅವರು ಪಾಲಿಕೆಯ ವಾರ್ಡ್ ಸಂಖ್ಯೆ 23ರಲ್ಲಿ ಸೋಮವಾರ ಪಾದಯಾತ್ರೆ ನಡೆಸಿದರು.
ಸುಬ್ಬರಾಯನಕೆರೆ ವ್ಯಾಪ್ತಿಯ ಕುರುಬಗೇರಿ, ಗೊಲ್ಲಗೇರಿ, ಅಗಸಗೇರಿ, ಮಡಿವಾಳರ ಬೀದಿ, ಎಂ.ಎನ್.ಜೋಯಿಸ್ ರಸ್ತೆ, ಸೋನಾರ್ ಬೀದಿ, ಗಾಣಿಗರ ಬೀದಿ, ಹಳೇ ಬಂಡಿಕೇರಿ, ಕ್ಷೇತ್ರಯ್ಯ ರಸ್ತೆ, ರಮಾವಿಲಾಸ ರಸ್ತೆ ಪ್ರದೇಶದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ, ಸ್ಥಳೀಯ ಮುಖಂಡರೊಂದಿಗೆ ಪಾದಯಾತ್ರೆಯ ಮೂಲಕ ಜನರ ಸಮಸ್ಯೆ ಆಲಿಸಿದರು.
ಶಾಂತಲಾ ಚಿತ್ರಮಂದಿರದ ಪಕ್ಕದಲ್ಲಿ ಹಾದುಹೋಗಿರುವ ರಾಜ ಕಾಲುವೆಯನ್ನು ಸ್ವಚ್ಛಗೊಳಿಸುವಂತೆ ಹಾಗೂ ಹಲವೆಡೆ ಕುಡಿಯುವ ನೀರು ಸಮರ್ಪಕವಾಗಿ ದೊರೆಯದೆ ಇರುವುದರಿಂದ ಹೆಚ್ಚಿನ ಅವಧಿವರೆಗೆ ನೀರು ಪೂರೈಸಬೇಕು ಎಂದು ಜನರು ಮನವಿ ಮಾಡಿದರು.
ಮೊಹಲ್ಲಾದ ಒಳಭಾಗದ ಗಲ್ಲಿಯಂತಿರುವ ಸಣ್ಣ ರಸ್ತೆಗಳ ದುರಸ್ತಿ, ಹಲವೆಡೆ ಮೋರಿಗೆ ಸ್ಲಾೃಬ್ ಇಲ್ಲದೆ ಇರುವುದು, ಹಲವೆಡೆ ಒಳಚರಂಡಿ ಕಾಮಗಾರಿ ಬಾಕಿ ಇರುವುದು ಹಾಗೂ ವಸತಿ ಪ್ರದೇಶದಲ್ಲಿ ಕೆಲವು ಮನೆಗಳು ಪಾಳುಬಿದ್ದು ಗಿಡ ಗಂಟಿಗಳು ಬೆಳೆದು ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದನ್ನು ಗಮನಿಸಿದ ಶಾಸಕರು, ತಕ್ಷಣ ಮನೆ ಮಾಲೀಕರಿಗೆ ನೋಟಿಸ್ ನೀಡಿ ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಹಲವಾರು ನಿವಾಸಿಗಳು ಸ್ವಂತ ಸೂರಿಗಾಗಿ ಶಾಸಕರ ಬಳಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇನ್ನೊಂದು ವರ್ಷದಲ್ಲಿ ಅರ್ಜಿ ಸಲ್ಲಿಸಿರುವ ಆಶ್ರಯ ಆಕಾಂಕ್ಷಿಗಳಿಗೆ ಸೂರು ನೀಡಲಾಗುವುದು. ನಂತರದ ದಿನಗಳಲ್ಲಿ ಹೊಸ ಅರ್ಜಿ ಪಡೆಯುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ನಂತರ ಶ್ರೀ ಮಹಾಲಕ್ಷ್ಮೀ ಕೊಲ್ಲಾಪುರದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು. ವಿವಿಧ ಸಮಸ್ಯೆಗಳಿಗೆ ಶೀಘ್ರ ಪರಿಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ವಿವಿಧ ಪಿಂಚಣಿಗಳ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಲಾಯಿತು. ದೇವರಾಜ ಬ್ಲಾಕ್ ಅಧ್ಯಕ್ಷ ರಮೇಶ್ ರಾಯಪ್ಪ, ವಾರ್ಡ್ ಅಧ್ಯಕ್ಷ ಆನಂದ್, ಪಾಲಿಕೆ ಮಾಜಿ ಸದಸ್ಯ ಡಿ.ನಾಗಭೂಷಣ್, ಮುಖಂಡರಾದ ಮಹದೇವ್, ಜ್ಞಾನೇಶ್, ಲೋಕೇಶ್ವರ, ಮಂಜಣ್ಣ, ಶ್ರೀನಿವಾಸ್, ಮಂಜುನಾಥ್, ಲೋಕೇಶ್, ಮಂಜುಳಾ, ಮಂಗಳಾ ಇನ್ನಿತರರಿದ್ದರು.