ಶಾಸಕ ಕೆ.ಜಿ. ಬೋಪಯ್ಯ ಉಮೇದುವಾರಿಕೆ ಸಲ್ಲಿಕೆ

17 vtp1 Namination
Published on

ವಿರಾಜಪೇಟೆ: ಮೇ 10ರಂದು ನಡೆಯುವ ಸಾರ್ವತ್ರಿಕ ಚುನಾವಣೆಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಕೆ.ಜಿ. ಬೋಪಯ್ಯ ಅವರು ತಮ್ಮ ಉಮೇದುವಾರಿಕೆಯನ್ನು ಚುನಾವಣಾಧಿಕಾರಿ ಶಬಾನಾ ಶೇಕ್ ಅವರಿಗೆ ಸೋಮವಾರ ಸಲ್ಲಿಸಿದರು.


ಆರಂಭದಲ್ಲಿ ಪಟ್ಟಣದ ಮಾರಿಗುಡಿಯಿಂದ ಪಕ್ಷದ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿ ಗಡಿಯಾರ ಕಂಬದ ಬಳಿ ಇರುವ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.


ನಾಮಪತ್ರ ಸಲ್ಲಿಕೆ ಸಂದರ್ಭ ವಿಧಾನ ಪರಿಷತ್ ಸದಸ್ಯ ಕುಶಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ವಿರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್‌ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಟ್ರಪಂಡ ರಘು ನಾಣಯ್ಯ, ಕುಂತಿ ಬೋಪಯ್ಯ ಇದ್ದರು.


ನಾಮಪತ್ರ ಸಲ್ಲಿಸಿದ ಶಾಸಕ ಬೋಪಯ್ಯ ಮಾತನಾಡಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ 5ನೇ ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದೇನೆ. ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು, ಮಂಡಲ ಅಧ್ಯಕ್ಷರು ಸಹಕಾರ ನೀಡಿದ್ದಾರೆ. ಈ ಬಾರಿ ಚುನಾಯಿತನಾಗಿ ಆರಿಸಿ ಬರುವ ವಿಶ್ವಾಸ ಇದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಜಿಲ್ಲೆಯ ಎರಡು ಕ್ಷೇತ್ರವನ್ನು ಭಾರತೀಯ ಜನತಾ ಪಕ್ಷ ಉಳಿಸಿಕೊಳ್ಳುತ್ತದೆ. ನಾಮಪತ್ರ ಸಲ್ಲಿಸುವ ಸಂದರ್ಭ ಕಾರ್ಯಕರ್ತರ ಅಭೂತಪೂರ್ವ ಬೆಂಬಲದಿಂದ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದೇನೆ ಎಂದು ಭವಿಷ್ಯ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net