ಶಾಸಕ ಕೆ.ಎಂ.ಶಿವಲಿಂಗೇಗೌಡಗೆ ಗೃಹ ಮಂಡಳಿ ಅಧ್ಯಕ್ಷ ಸ್ಥಾನ

ಶಾಸಕ ಕೆ.ಎಂ.ಶಿವಲಿಂಗೇಗೌಡಗೆ ಗೃಹ ಮಂಡಳಿ ಅಧ್ಯಕ್ಷ ಸ್ಥಾನ
Published on

ಹಾಸನ: ಗಣರಾಜ್ಯೋತ್ಸವ ದಿನದಂದೇ ಕಾಂಗ್ರೆಸ್ ಸರ್ಕಾರ 34 ಜನ ಹಿರಿಯ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದ್ದು, ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರಿಗೆ ಗೃಹ ಮಂಡಳಿ ಅಧ್ಯಕ್ಷ ಹುದ್ದೆ ನೀಡಲಾಗಿದೆ. ಬಿಡುಗಡೆ ಮಾಡಲಾಗಿರುವ ಪಟ್ಟಿಯಲ್ಲಿ ನಮೂದಿಸಲಾಗಿರುವ ಶಾಸಕರನ್ನು ನಿಗಮ/ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಎರಡು ವರ್ಷದ ಅವಧಿಗೆ ನೇಮಿಸಿ ಆದೇಶಿಸಲಾಗಿದೆ.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಒಬ್ಬರೇ ಶಾಸಕರು ಇರುವುದರಿಂದ ಪಕ್ಷದ ಸಂಘಟನೆ ಮತ್ತು ಚುನಾವಣೆ ದೃಷ್ಟಿಯಿಂದ ಅವರಿಗೆ ಗೃಹ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೀಡಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ತೂರೆದು ಕಾಂಗ್ರೆಸ್ ಸೇರಿ ಸತತ 4ನೇ ಬಾರಿಗೆ ಗೆಲುವು ಸಾಧಿಸಿರುವ ಕೆ.ಎಂ. ಶಿವಲಿಂಗೇಗೌಡ ಅವರು ಸಚಿವ ಸ್ಥಾನದ ಪ್ರಬಲ ಆಕ್ಷಾಂಕಿಯಾಗಿದ್ದರು. ಇವರಿಗೆ ಮಂತ್ರಿಗಿರಿ ಸಿಗುತ್ತದೆ ಎಂದೇ ಹೇಳಲಾಗುತ್ತಿತು. ಆದರೆ ಅಂತಿಮ ಕ್ಷಣದಲ್ಲಿ ಮಂತ್ರಿ ಗಿರಿ ಕೈ ತಪ್ಪಿತು.
ವಿಜಯವಾಣಿ ಜತೆಗೆ ಮಾತನಾಡಿದ ಶಿವಲಿಂಗೇಗೌಡ ಅವರು, ‘ಕಾಂಗ್ರೆಸ್ ಸೇರ್ಪಡೆ ವೇಳೆ ಪಕ್ಷ ಅಧಿಕಾರಕ್ಕೆ ಬಂದರೆ ಮಂತ್ರಿ ಸ್ಥಾನ ನೀಡುವ ಭರವಸೆಯನ್ನು ಮೂವರು ನಾಯಕರು ನೀಡಿದ್ದರು. ಆ ಷರತ್ತಿನ ಮೇಲೆ ನಾನು ಪಕ್ಷ ಸೇರ್ಪಡೆಯಾಗಿದ್ದೆ. ಕಾರಣಾಂತರಗಳಿಂದ ಸಚಿವ ಸ್ಥಾನ ಕೈ ತಪ್ಪಿತು. ಈಗ ಸಚಿವ ಸ್ಥಾನ ನೀಡಲು ಆಗುವುದಿಲ್ಲ. ಮುಂದೆ ಸಂಪುಟ ಪುನಾರಚನೆಯಾದಾಗ ಸಚಿವ ಸ್ಥಾನ ನೀಡುವುದಾಗಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಅಲ್ಲಿಯವರೆಗೂ ಈಗ ಕೊಟ್ಟಿರುವ ಸ್ಥಾನವನ್ನು ನಿರ್ವಹಿಸಿಕೊಂಡು ಹೋಗುತ್ತೇನೆ,’ ಎಂದು ಹೇಳಿದರು.

ನಾನು ಈ ಹಿಂದೆ ಮೂರು ತಿಂಗಳ ಕಾಲ ಗೃಹ ಮಂಡಳಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ. ನಾನು ಕೂಡ ಇದೇ ನಿಗಮ ಮಂಡಳಿ ಬೇಕು ಎಂದು ಕೇಳಿದ್ದೆ. ಅದರಂತೆ ಅದೇ ಸ್ಥಾನ ನೀಡಿದ್ದಾರೆ. ರಾಜ್ಯಾದ್ಯಂತ ಗೃಹ ಮಂಡಳಿಯ ಸಾವಿರಾರು ಕೋಟಿ ರೂ. ಆಸ್ತಿ ಇದೆ. ಜನರಿಗೆ ಒಳ್ಳೆಯ ಕೆಲಸ ಮಾಡಬೇಕು ಎಂಬುದಷ್ಟೇ ನನಗೆ ಇರುವುದು. ಈಗ ಕೊಟ್ಟಿರುವ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತೇನೆ.

  • ಕೆ.ಎಂ. ಶಿವಲಿಂಗೇಗೌಡ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net