ಶಾಸಕ ಕೃಷ್ಣಾರೆಡ್ಡಿ ವಿರುದ್ಧ ಮಾಜಿ ಶಾಸಕ ಸುಧಾಕರ್ ಬಣ ಕಹಳೆ; ದುರಾಡಳಿತದ ಆರೋಪದಲ್ಲಿ ಪ್ರತಿಭಟನಾ ರ‌್ಯಾಲಿ

16cmy2
Published on

ಚಿಂತಾಮಣಿ: ಶಾಸಕ ಎಂ.ಕೃಷ್ಣಾರೆಡ್ಡಿ ಅವಧಿಯಲ್ಲಿ ತಾಲೂಕಿನಾಧ್ಯಂತ ಭ್ರಷ್ಟಾಚಾರ, ದುರಾಡಳಿತ ನಡೆಯುತ್ತಿದೆ ಎಂದು ಆರೋಪಿಸಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಬೆಂಬಲಿತ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಿದರು.

ನಗರ ಸೇರಿ ತಾಲೂಕಿನ ವಿವಿಧೆಡೆಯಿಂದ ಬೆಂಬಲಿಗರು ಮಾಳಪಲ್ಲಿಯ ಅಂಜನಿ ನಿವಾಸದ ಬಳಿ ಜಮಾವಣೆಯಾಗಿ ನಂತರ ಬೆಂಗಳೂರು ಜೋಡಿ ರಸ್ತೆ, ಬೆಂಗಳೂರು ವೃತ್ತ, ಪಿಸಿಅರ್ ವೃತ್ತ, ಚೇಳೂರು ರಸ್ತೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಡಿ.ಹನುಮಂತರಾಯಪ್ಪಗೆ ಮನವಿ ಸಲ್ಲಿಸಿದರು.

ತಾಲೂಕು ಕಚೇರಿ ಪಕ್ಕದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ತಾಪಂ ಮಾಜಿ ಅಧ್ಯಕ್ಷ ಮುರಗಮಲ್ಲಾ ಲಕ್ಷ್ಮೀನಾರಾಯಣ ರೆಡ್ಡಿ, ರಾಗುಟ್ಟಹಳ್ಳಿ ರಘುನಾಥರೆಡ್ಡಿ, ನಗರಸಭೆ ಸದಸ್ಯೆ ರಾಣಿಯಮ್ಮ, ಎಪಿಎಂಸಿ ಮಾಜಿ ಅಧ್ಯಕ್ಷ ಕುರುಟುಹಳ್ಳಿ ಕೃಷ್ಣಮೂರ್ತಿ, ಮುಖಂಡ ಸಮದ್, ಸುರೇಶ್, ನಾರಾಯಣ್‌ನಾಯಕ್, ಗಂಜೂರು ರಾಮಲಕ್ಷ್ಮಮ್ಮಮತ್ತಿತರರು ಶಾಸಕ ಕೃಷ್ಣಾರೆಡ್ಡಿ ನಡೆಯನ್ನು ಖಂಡಿಸಿದರು.ಶಾಸಕರು 8 ವರ್ಷಗಳ ಅವಧಿಯ ಕಾರ್ಯನಿರ್ವಹಣೆಯಲ್ಲಿ ವಿಫಲರಾಗಿಲ್ಲದಲ್ಲದೆ ತಮ್ಮ ಪಕ್ಷದವರಿಗೆ ಮಾತ್ರ ಶಾಸಕರಾಗಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಡಾ.ಬಿ.ಅರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಅಲ್ಪಸಂಖ್ಯಾರ ಅಭಿವೃದ್ಧಿ ನಿಗಮ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಸೌಲಭ್ಯವನ್ನು ತಮ್ಮ ಹಿಂಬಾಲಕರಿಗೆ ಮಾತ್ರ ನೀಡಿದ್ದಾರೆ ಎಂದು ಆರೋಪಿಸಿದರು.

ಮನೆ ನೆಲಸಮ, ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರ, ಕುಡಿಯುವ ನೀರು ಒಗಿಸುವಲ್ಲಿ ಸಂಪೂರ್ಣ ವಿಫಲ, ಪ್ಲಾಸ್ಟಿಕ್‌ಮುಕ್ತ ನಗರದಲ್ಲಿ ಮತ್ತೆ ಪ್ಲಾಸ್ಟಿಕ್ ತಾಂಡವಾಡುವಂತೆ ಮಾಡಿದ್ದಾರೆ ಎಂದು ದೊಡ್ಡಗಂಜೂರು ರಾಮಲಕ್ಷ್ಮಮ್ಮ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಝಾನ್ಸಿ ಮೈದಾನದ ಅಂಗಡಿಗಳ ಬಾಡಿಗೆ ವಸೂಲಿಯಲ್ಲಿ ಮಾಡಿಲ್ಲ, ತಾಲೂಕಿನ ಶೈಕ್ಷಣಿಕವಾಗಿ ಹಿನ್ನಡೆಯಾಗಿದೆ, ಗೋಪಸಂದ್ರ ಮತ್ತು ನೆಕ್ಕುಂದಿ ಕೆರೆಗಳ ಅಭಿವೃದ್ಧಿ ಕಡೆಗಣಿಸಿರುವುದು ಸೇರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆದಿರುವುದು ಶಾಸಕ ಕೃಷ್ಣಾರೆಡ್ಡಿ ಅವರ ಸಾಧನೆ ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net