ಶಾಸಕ ಎಚ್.ಪಿ.ಸ್ವರೂಪ್ ಅಧ್ಯಕ್ಷತೆಯಲ್ಲಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

ಶಾಸಕ ಎಚ್.ಪಿ.ಸ್ವರೂಪ್ ಅಧ್ಯಕ್ಷತೆಯಲ್ಲಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ
Published on

ಹಾಸನ: ತಾಲ್ಲೂಕಿನ ಎಷ್ಟು ಕೆರೆಗಳಿಗೆ ಯಾವ ಅವಧಿಯಲ್ಲಿ ಎಷ್ಟೆಷ್ಟು ಮೀನುಗಳನ್ನು ಬಿಡಲಾಗಿದೆ. ಇದರಿಂದ ಗ್ರಾಮ ಪಂಚಾಯಿತಿಗೆ ಬಂದಿರುವ ಆದಾಯ ಮತ್ತು ಅದನ್ನು ಯಾವುದಕ್ಕೆ ಬಳಕೆ ಮಾಡಲಾಗಿದೆ ಎಂಬುದರ ವಿವರ ನೀಡಬೇಕೆಂದು ಶಾಸಕ ಎಚ್.ಪಿ.ಸ್ವರೂಪ್ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೀನುಗಾರಿಕೆ ಇಲಾಖೆಯಿಂದ ಕೆರೆಗಳಿಗೆ ಪ್ರತಿವರ್ಷ ಮೀನುಗಳನ್ನು ಬಿಡಲಾಗುತ್ತಿದೆಯಾದರೂ ಅದರಿಂದ ಗ್ರಾಮ ಪಂಚಾಯಿತಿಗೆ ಬರುತ್ತಿರುವ ಆದಾಯ ಎಷ್ಟು ಎಂಬ ಮಾಹಿತಿಯೇ ತಿಳಿಯುತ್ತಿಲ್ಲ. ಈ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕು. ಮೀನುಗಾರಿಕೆ ಸೇರಿ ಎಲ್ಲಾ ಇಲಾಖೆ ಅಧಿಕಾರಿಗಳು ಸಂಬಂಧಿಸಿದ ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡಿರಬೇಕು. ಶ್ರಮವಹಿಸಿ ಕೆಲಸ ಮಾಡುವ ಮೂಲಕ ಜನರಿಗೆ ನೆರವಾಗಬೇಕೆಂದು ಸೂಚಿಸಿದರು.
ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿಕಾಸ್ ಅವರು ಮಾತನಾಡಿ, ಹಾಸನ ತಾಲ್ಲೂಕು ವ್ಯಾಪ್ತಿಯಲ್ಲಿ 98 ಕೆರೆಗಳಿದ್ದು, ಎಲ್ಲಾ ಕೆರೆಗಳಿಗೆ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಹಾಗು ಅಧಿಕಾರಿಗಳ ಸಮ್ಮುಖದಲ್ಲಿ ಕೆರೆಗೆ ಮೀನು ಬಿಡಲಾಗಿದೆ ಎಂದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರವಿ ಅವರು ಮಾತನಾಡಿ, ಫಲಪುಷ್ಪ ಪ್ರದರ್ಶನ ಸಂಬಂಧ ಜಿಲ್ಲಾ ಪಂಚಾಯಿತಿಯಿಂದ 7 ಲಕ್ಷ ರೂ. ಅನುದಾನ ಬಂದಿದೆ. ಜೇನು ಸಾಕಾಣಿಕೆ ಉದ್ದೇಶದಿಂದ 40 ರೈತರಿಗೆ ಜೇನು ಸಾಕಾಣಿಕೆ ಪೆಟ್ಟಿಗೆ ವಿತರಿಸಲಾಗಿದೆ ಎಂದರು.
ಒಂದುಬಾಕ್ಸ್ ಜೇನು ಉತ್ಪಾದನೆಯಿಂದ 4 ಕೆ.ಜಿ. ಜೇನು ತುಪ್ಪ ಪಡೆಯಬಹುದು. ರೈತರಿಗೆ ಆರ್ಥಿಕವಾಗಿ ಜೇನು ಸಾಕಾಣಿಕೆ ನೆರವಾಗುತ್ತದೆ. ಆ ನಿಟ್ಟಿನಲ್ಲಿ ಇಲಾಖೆಯು ಸರ್ವ ಪ್ರಯತ್ನ ನಡೆಸುತ್ತಿದೆ. ಇನ್ನು ವಿಯೆಟ್ನಾಂ ಮಾದರಿಯಲ್ಲಿ ಆಲೂಗಡ್ಡೆ ಬಿತ್ತನೆಗೆ ಕ್ರಮ ಕೈಗೊಂಡಿದ್ದು, 20 ಎಕರೆ ಜಮೀನನ್ನು ನರ್ಸರಿಗಾಗಿ ಪಡೆದಿದ್ದೇವೆ. ತಾಲ್ಲೂಕಿನ ಮೊಸಳೆ ಹೊಸಹಳ್ಳಿ, ಕಟ್ಟಾಯ ಹಾಗು ಸಾಲಗಾಮೆಯಲ್ಲಿ ರೈತ ಉತ್ಪಾದಕ ಘಟಕಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಅವರು ಮಾತನಾಡಿ, ಕೋವಿಡ್ ರೂಪಾಂತರಿ ತಳಿ ಜೆಎನ್1 ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ತಾಲ್ಲೂಕಿನ 1100 ಜನರಿಗೆ ಬೂಸ್ಟರ್ ಡೋಸ್ ನೀಡಬೇಕಿದೆ. 60 ವರ್ಷ ಮೇಲ್ಪಟ್ಟ ಎಲ್ಲರೂ ಮಾಸ್ಕ್ ಧರಿಸಬೇಕೆಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ಎಲ್ಲರೂ ಮಾಸ್ಕ್ ಧರಿಸಬೇಕು. ಆರೋಗ್ಯದಲ್ಲಿ ವ್ಯತ್ಯಾಸವಾದರೆ ಕೂಡಲೇ ವೈದ್ಯಕೀಯ ತಪಾಸಣೆ ಪಡೆಯಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಿರೀಶ್, ಪ್ರಭಾರ ತಹಶೀಲ್ದಾರ್ ಮೋಹನ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net