ಶಾಸಕ ಎಚ್.ಪಿ.ಮಂಜುನಾಥ್ ವಿರುದ್ಧ ಪ್ರತಿಭಟನೆ

HUN-MAR-24-4(KURUBA STRIKE)
ಹುಣಸೂರು ನಗರದಲ್ಲಿ ತಾಲೂಕು ಕುರುಬ ಸಮಾಜ ಮತ್ತು ಗಣೇಶ್ ಕುಮಾರಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಶಾಸಕ ಮಂಜುನಾಥ್ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
Published on

ಹುಣಸೂರು: ಶಾಸಕ ಎಚ್.ಪಿ.ಮಂಜುನಾಥ್ ಅಸಂವಿಧಾನಿಕವಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿ ತಾಲೂಕು ಕುರುಬ ಸಮಾಜ ಮತ್ತು ಗಣೇಶ್ ಕುಮಾರಸ್ವಾಮಿ ಸ್ನೇಹಬಳಗದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಶುಕ್ರವಾರ ನಗರದ ಸಂವಿಧಾನ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಶಾಸಕ ಎಚ್.ಪಿ.ಮಂಜುನಾಥ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.

ತಾಲೂಕು ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ವಾಸೇಗೌಡ ಮಾತನಾಡಿ, ವಾರದ ಹಿಂದೆ ನಗರದ ಕಲ್ಕುಣಿಕೆಯಲ್ಲಿ ನಗರೋತ್ಥಾನ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಕುರಿತಂತೆ ಶಾಸಕ ಮಂಜುನಾಥ್ ಅವರನ್ನು ಹುಡಾ ಅಧ್ಯಕ್ಷ ಹಾಗೂ ತಾಲೂಕು ಕುರುಬ ಸಮಾಜದ ಯುವ ಮುಖಂಡ ಗಣೇಶ್ ಕುಮಾರಸ್ವಾಮಿ ಪ್ರಶ್ನಿಸಿದ ವೇಳೆ ಅವರ ವಿರುದ್ಧ ಅವಾಚ್ಯಶಬ್ದಗಳನ್ನು ಬಳಸಿದ್ದಾರೆ. ಅಲ್ಲದೆ ಎಳೆದಾಡುವ ಮೂಲಕ ದುಂಡಾವರ್ತನೆ ಪ್ರದರ್ಶಿಸಿರುವುದು ಇಡೀ ಕುರುಬ ಸಮುದಾಯದ ಬೇಸರಕ್ಕೆ ಕಾರಣವಾಗಿದೆ. ಕುರುಬ ಸಮಾಜ ಸತತ ನಾಲ್ಕು ಚುನಾವಣೆಯಲ್ಲಿ ಶಾಸಕ ಮಂಜುನಾಥ್‌ರನ್ನು ಬೆಂಬಲಿಸಿದೆ ಎನ್ನುವುದನ್ನು ಮಂಜುನಾಥ್ ಮರೆತಿದ್ದಾರೆ. ಈ ಬಾರಿ ಸಮಾಜ ಮಂಜುನಾಥ್ ಅವರಿಗೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.

ಗಣೇಶ ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷ ಮಲ್ನಾಡ್ ರವಿಕುಮಾರ್ ಮಾತನಾಡಿ, ಶಾಸಕ ಮಂಜುನಾಥ್ ಅವರ ದುಂಡಾವರ್ತನೆಗೆ ತಾಲೂಕಿನ ಜನತೆ ಮುಂಬರುವ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಗಣೇಶ್ ಕುಮಾರಸ್ವಾಮಿ ಆಗಮಿಸಿದರು. ಮುಖಂಡರಾದ ಗಣಪತಿ, ಪ್ರಭಾಕರ್, ಜವರೇಗೌಡ್ರು, ಸೋಮಣ್ಣ, ಚಂದ್ರಣ್ಣ, ಹರಿಗುಡ್ಡಪ್ಪ ಮಂಜು, ರವಿಕುಮಾರ್, ಮುದ್ದುರಾಮ್, ಮಧು, ರವಿಶಂಕರ್, ಮೀನಾಕ್ಷಿ ಕೃಷ್ಣಮೂರ್ತಿ, ಯಶೋದಮ್ಮ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net