ಶಾಶ್ವತವಾಗಿ ಉಳಿಯಲಿರುವ ಮಾನವೀಯ ಸೇವೆ

ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ದ್ವಿಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫ್ರೀಜರ್ ಮತ್ತು ಅಂತ್ಯಕ್ರಿಯೆಗೆ ಅಗತ್ಯವಿರುವ ಪರಿಕರಗಳನ್ನು ಲೋಕಾರ್ಪಣೆ ಮಾಡಲಾಯಿತು. ರೆ.ಫಾ.ಜೇಮ್ಸ್ ಡೊಮಿನಿಕ್, ಮದಲೈ ಮುತ್ತು, ಬೆನೆಡಿಕ್ಟ್ ಆರ್.ಸಲ್ದಾನ, ಮಾರ್ಟಿನ್ ಬರ್ನಾಡ್, ಚೋಫಿ ಜೋಸೇಫ್, ಜೋಕಿಂ ರೊಡ್ರಿಗ್ರಸ್, ಎ.ಸಿ.ಜಾನ್ಸನ್ ಇದ್ದರು.
ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ದ್ವಿಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫ್ರೀಜರ್ ಮತ್ತು ಅಂತ್ಯಕ್ರಿಯೆಗೆ ಅಗತ್ಯವಿರುವ ಪರಿಕರಗಳನ್ನು ಲೋಕಾರ್ಪಣೆ ಮಾಡಲಾಯಿತು. ರೆ.ಫಾ.ಜೇಮ್ಸ್ ಡೊಮಿನಿಕ್, ಮದಲೈ ಮುತ್ತು, ಬೆನೆಡಿಕ್ಟ್ ಆರ್.ಸಲ್ದಾನ, ಮಾರ್ಟಿನ್ ಬರ್ನಾಡ್, ಚೋಫಿ ಜೋಸೇಫ್, ಜೋಕಿಂ ರೊಡ್ರಿಗ್ರಸ್, ಎ.ಸಿ.ಜಾನ್ಸನ್ ಇದ್ದರು.
Published on

ವಿರಾಜಪೇಟೆ: ಮಾನವ ತನ್ನ ಜೀವಿತಾವಧಿಯಲ್ಲಿ ಹಲವಾರು ಏಳು-ಬೀಳು ಕಂಡರೂ ಸಹ ಮಾನವೀಯ ಸೇವೆಗಳು ಮಾತ್ರ ಕೊನೆಯವರೆಗೂ ಉಳಿಯಲಿದೆ ಎಂದು ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ರೆ.ಫಾ.ಜೇಮ್ಸ್ ಡೊಮಿನಿಕ್ ಅಭಿಪ್ರಾಯಪಟ್ಟರು.

ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘದಿಂದ ಸಂತ ಅನ್ನಮ್ಮ ದೇವಾಲಯದ ದ್ವಿಶತಮಾನೋತ್ಸವ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಫ್ರೀಜರ್(ಮೃತದೇಹ ಸಂರಕ್ಷಿಸುವ ಶೀತಲೀಕರಣ ಪೆಟ್ಟಿಗೆ) ಮತ್ತು ಅಂತಿಮ ಕ್ರಿಯೆಗೆ ಬೇಕಾಗುವ ಪರಿಕರಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಾನವೀಯ ಗುಣಗಳನ್ನು ಹೊಂದಿರುವವನು ನಿಜವಾದ ಮನುಜ. ದೇಹ ತ್ಯಜಿಸಿ ಇಹಲೋಕದ ಯಾತ್ರೆಗೆ ತೆರಳುವವನ ಕ್ರಿಯೆಗಳು ಮಾನವೀಯ ನೆಲೆಯಲ್ಲಿ ಗೌರವಪೂರ್ವಕವಾಗಿರಬೇಕು. ಈ ನಿಟ್ಟಿನಲ್ಲಿ ಸ್ನೇಹಿತರ ಸಂಘದ ಸದಸ್ಯರು ದಾನಿಗಳ ನೆರವಿನಿಂದ ಫ್ರೀಜರ್ ಮತ್ತು ಅಂತಿಮ ಕ್ರಿಯೆಗೆ ಬೇಕಾಗುವ ಪರಿಕರಗಳನ್ನು ಖರೀದಿಸಿ ನೀಡಿದ್ದಾರೆ. ಇದರಿಂದ ಅಂತಿಮ ಕ್ರಿಯೆಗಳಿಗೆ ತೊಡಕುಗಳಾಗದು. ಈ ಸೌಲಭ್ಯ ಬಡವರಿಗೆ ಉಚಿತವಾಗಿ ದೊರಕುವಂತಾಗಬೇಕು ಎಂದರು.

ಸಂಘದ ಕಚೇರಿ ಉದ್ಘಾಟಿಸಿ ಮಾತನಾಡಿದ ಸಂತ ಅನ್ನಮ್ಮ ದೇವಾಲಯದ ಸಹಾಯಕ ಧರ್ಮಗುರುಗಳಾದ ರೆ.ಫಾ ಮುದಲೈಮುತ್ತು, ಮನುಷ್ಯನ ಅಂತಿಮ ಕ್ರಿಯೆಗೆ ಬೇಕಾಗುವ ಪರಿಕರಗಳನ್ನು ಖರೀದಿಸಿ ನೀಡಿದ್ದು, ಮುಂದಿನ ದಿನಗಳಲ್ಲಿಯೂ ಸಂಘ ಸಾಮಾಜಿಕ ಕಳಕಳಿ ಮೆರೆಯಬೇಕು ಎಂದು ಹೇಳಿದರು.

ಸಂಘದ ಮಾಜಿ ಅಧ್ಯಕ್ಷ ಜ್ಯೂಡಿ ವಾಜ್ ಮಾತನಾಡಿ, ಸಂಘ ಸ್ಥಾಪನೆಯಾಗಿ 14 ವರ್ಷ ಕಳೆದಿದೆ. ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಕ್ರೀಡೆಗಳನ್ನೂ ಆಯೋಜಿಸುತ್ತಿದ್ದು, 2024ರಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟದ ಉಳಿತಾಯ ಹಣ ಮತ್ತು ದಾನಿಗಳ ನೆರವಿನಿಂದ ಫ್ರೀಜರ್, ಗುದ್ದಲಿ, ಹಾರೆ, ಕುರ್ಚಿಗಳು, ಟೇಬಲ್, ಪರದೆ ಖರೀದಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮುದಾಯದ ಪ್ರಮುಖರಾದ ಮಾರ್ಟಿನ್ ಬರ್ನಾಡ್, ಚೋಫಿ ಜೋಸೇಫ್, ಜೋಕಿಂ ರೊಡ್ರಿಗ್ರಸ್, ಬೆನೆಡಿಕ್ಟ್ ಆರ್.ಸಲ್ಡಾನಾ, ಎ.ಸಿ ಜಾನ್ಸನ್, ಸಂಘದ ಅಧ್ಯಕ್ಷ ಜಾನ್ಸನ್ ಡಿಸೋಜಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net