ಶಾಶ್ವತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ: ಸಚಿವ ಕೆ. ಗೋಪಾಲಯ್ಯ

ಶಾಶ್ವತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ: ಸಚಿವ ಕೆ. ಗೋಪಾಲಯ್ಯ
Published on

ಹಾಸನ: ಕಾಡಾನೆ ಸಮಸ್ಯೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಶಾಶ್ವತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನ ಸೇರಿದಂತೆ ಕಾಡಾನೆಗಳ ಸಮಸ್ಯೆ ಹೆಚ್ಚಾಗಿರುವ ನಾಲ್ಕು ಜಿಲ್ಲೆಗಳಲ್ಲಿ ವಿಶೇಷ ಕಾರ್ಯಪಡೆ ರಚಿಸಲು ತೀರ್ಮಾನಿಸಿ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.


ಆಲೂರು ತಾಲೂಕು ಸಂಕಲಾಪುರ ಮಠದಲ್ಲಿ ಬುಧವಾರ ನಡೆದ ಶಾಂತಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈಗಾಗಲೇ ಕಾಡಾನೆಗಳ ಹಾವಳಿ ತಡೆಯಲು ರೈಲುಹಳಿಗಳ ಬ್ಯಾರಿಕೇಡ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆದಷ್ಟು ಬೇಗ ಈ ಕಾಮಗಾರಿ ಮುಗಿಸಲು ಒಂದೇ ಬಾರಿಗೆ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.


ಮಲೆನಾಡು ಭಾಗದಲ್ಲಿ ಕಾಡಾನೆಗಳ ಸಂತತಿ ಹೆಚ್ಚಾಗಿದೆ. ಹಾಗಾಗಿ ಆಹಾರ ಅರಸಿ ಅವರು ಹೊಲ, ಗದ್ದೆ, ತೋಟಗಳಿಗೆ ದಾಳಿ ಮಾಡುತ್ತಿವೆ. ಕಾಡಾನೆಗಳು ನಾಡಿಗೆ ನುಗ್ಗದಂತೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಿ ಕಾಡಿನಲ್ಲೇ ಯಥೇಚ್ಚ ಆಹಾರ ದೊರೆಯುವ ವ್ಯವಸ್ಥೆ ಮಾಡಿದರೆ ಕಾಡಾನೆ ಹಾವಳಿ ಕಡಿಮೆ ಆಗಲಿದೆ ಎಂದು ಅಭಿಪ್ರಾಯಪಟ್ಟರು.

ಉಗ್ರರ ಮಟ್ಟ ಹಾಕಲು ಕ್ರಮ:
ಮಂಗಳೂರಲ್ಲಿ ನಡೆದಿರುವ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಭಗವಂತನ ದಯೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಮುಖ್ಯಮಂತ್ರಿಗಳು ಬರುವ ದಿನವೇ ವಿಧ್ವಂಸಕ ಕೃತ್ಯ ನಡೆಸುವುದಕ್ಕೆ ಸಂಚು ಮಾಡಿದ್ದು ನಮ್ಮೆಲ್ಲರಿಗೂ ಆಘಾತ ತಂದಿದೆ ಎಂದರು.
ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತಳ ಮಟ್ಟದಿಂದ ತನಿಖೆಯಾಗುತ್ತಿದೆ. ಸ್ಫೋಟದ ಹಿಂದೆ ಯಾರ‌್ಯಾರು ಭಾಗಿಯಾಗಿದ್ದಾರೆ, ಉಗ್ರ ಚಟುವಟಿಕೆಗೆ ಯಾರು ಆಶ್ರಯ ಕೊಟ್ಟಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗುವುದು. ತನಿಖೆ ಚುರು ಕುಗೊಳಿಸಿ ಉಗ್ರರ ಮಟ್ಟ ಹಾಕುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಕೂಸು:
ಬೆಂಗಳೂರಿನಲ್ಲಿ ನಡೆದಿರುವ ಮತದಾರರ ಗುರುತಿನ ಚೀಟಿ ಅಕ್ರಮ ವಿಚಾರವಾಗಿ ಮಾತನಾಡಿದ ಸಚಿವರು, ಈ ಬಗ್ಗೆ ಸಮೀಕ್ಷೆ ನಡೆಸಲು ಹಿಂದೆ ಕಾಂಗ್ರೆಸ್ ಸರ್ಕಾರವೇ ಚಿಲುಮೆ ಸಂಸ್ಥೆಯನ್ನು ನೇಮಕ ಮಾಡಿತ್ತು. ಈ ಅಕ್ರಮ ಕಾಂಗ್ರೆಸ್ ಕೂಸು ಎಂದು ದೂರಿದರು.
ಈ ಬಗ್ಗೆ ಸಿಎಂ ಸಮಗ್ರ ತನಿಖೆಗೆ ಆದೇಶ ಮಾಡಿದ್ದಾರೆ. ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿದೆ. ಇದರ ಹಿಂದೆ ಯಾರಿದ್ದಾರೆ, ಯಾರು ಹೀಗೆ ಮಾಡಿದರು, ಏನೆಲ್ಲಾ ಅಕ್ರಮ ಆಗಿದೆ ಎಂಬುದರ ಬಗ್ಗೆಯೂ ತನಿಖೆ ನಡೆಯಲಿದೆ. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಖಂಡಿತಾ ಶಿಕ್ಷೆ ಆಗಲಿದೆ. ಮೊದಲು ತನಿಖೆ ಆಗಲಿ, ಸತ್ಯ ಹೊರ ಬರಲಿ, ನಂತರ ಏನು ಮಾಡಬೇಕು ಎಂಬುದನ್ನು ಸರ್ಕಾರ ನಿರ್ಧರಿಸಲಿದೆ ಎಂದು ನುಡಿದರು.

ಜೆಡಿಎಸ್ ಮೊದಲು ಅಧಿಕಾರಕ್ಕೆ ಬರಲಿ:
ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತರನ್ನು ಉಪ ಮುಖ್ಯಮಂತ್ರಿ ಮಾಡುವುದಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅವರವರ ಪಕ್ಷದ ವಿಚಾರವನ್ನು ಅವರು ಹೇಳಿಕೊಳ್ತಾರೆ. ಅವರು ಮೊದಲು ಅಧಿಕಾರಕ್ಕೆ ಬರಲಿ, ಜನರು ಆಶೀರ್ವಾದ ಮಾಡಲಿ ಎಂದರು.


ಈಗ ನಡೆಯುತ್ತಿರುವ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಯಾವ ಫಲಿತಾಂಶ ಬರುತ್ದೋ ಅದೇ ಫಲಿತಾಂಶ ಕರ್ನಾಟಕ ರಾಜ್ಯದಲ್ಲೂ ಬರಲಿದೆ. ನೂರಕ್ಕೆ ನೂರರಷ್ಟು ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಗೋಪಾಲಯ್ಯ ವಿಶ್ವಾಸ ವ್ಯಕ್ತಪಡಿಸಿದರು.


ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಶ್ಲೀಲ ಪದ ಬಳಸಿರುವ ಕುರಿತು ಪ್ರಶ್ನಿಸಿದಾಗ, ಅವರು ರಾಜಕಾರಣದಲ್ಲಿ ಬಹಳ ದೊಡ್ಡವರು. ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net