ಶಾಶ್ವತ ನೀರಾವರಿ, ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು

bir mla
ಬೀರೂರು ಹೋಬಳಿ ಗಾಳೀಹಳ್ಳಿ ಬಳಿಯ ಪಾದದಕೆರೆಗೆ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು. ಬಿ.ಕೆ.ಶಶಿಧರ್, ಎಲೆ ರವಿಕುಮಾರ್, ಎಂ.ಪಿ.ವಿಶ್ವನಾಥ ಆಚಾರ್, ಶಿವಣ್ಣ ಇತರರಿದ್ದರು.
Published on

ಬೀರೂರು: ಭದ್ರಾ ಉಪಕಣಿವೆ ಯೋಜನೆಯ 118 ಕೆರೆ ನೀರು ತುಂಬಿಸುವ ಯೋಜನೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಕಲ್ಪಿಸಲು ಹೆಚ್ಚು ಒತ್ತು ನೀಡಲಾಗಿದೆ ಹಾಗೂ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಗಾಳೀಹಳ್ಳಿ ಸಮೀಪದ ಖರೀದಿಕಟ್ಟೆಯ ಶ್ರೀ ಮೈಲಾರಲಿಂಗೇಶ್ವರ ಮೂಲಸ್ಥಾನ ಪಾದದ ಕೆರೆ ದೇವಸ್ಥಾನಕ್ಕೆ ಸಾಗಲು 50 ಲಕ್ಷ ರೂ. ವೆಚ್ಚದ ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗೆ ಭಾನುವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಕಡೂರು ಬರಪೀಡಿತ ತಾಲೂಕಾಗಿದ್ದು, ಇಲ್ಲಿಗೆ ಭದ್ರಾ ಉಪಕಣಿವೆ ಯೋಜನೆಯಿಂದ ಶಾಶ್ವತ ನೀರಾವರಿ ಯೋಜನೆಗೆ 3ನೇ ಹಂತದ ವೇಗ ದೊರೆತಿದ್ದು, 2027ರ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲೂ 407 ಕೋಟಿ ರೂ. ಅನುದಾನ ನೀಡಿದ್ದಾರೆ. ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಜನ ಗುಳೆ ಹೋಗುತ್ತಿರುವುದನ್ನು ಗಮನಿಸಿ ಸರ್ಕಾರದ ಮುಂದೆ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ನನ್ನ ಕ್ಷೇತ್ರಕ್ಕೆ ಜವಳಿ ಪಾರ್ಕ್ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ. ಶೀಘ್ರದಲ್ಲಿ ಜವಳಿ ಪಾರ್ಕ್ ಅನುಷ್ಠಾನವಾಗಿ ಇಲ್ಲಿನ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲಾಗುತ್ತದೆ. ಜವಳಿ ಪಾರ್ಕ್‌ನಲ್ಲಿ ಸಣ್ಣಉದ್ದಿಮೆದಾರರು ಉದ್ದಿಮೆ ಆರಂಭಿಸಲು ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.

ಸೇತುವೆ ನಿರ್ಮಾಣ ಕಾಮಗಾರಿ 50 ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣವಾಗುವುದಿಲ್ಲ ಎಂಬುದನ್ನು ಇಂಜಿನಿಯರ್ ತಿಳಿಸಿದ್ದಾರೆ. ಆದ್ದರಿಂದ ಹೆಚ್ಚುವರಿ 40 ಲಕ್ಷ ಹಣವನ್ನು ನೀಡಿ ಗುಣಮಟ್ಟದ ಸೇತುವೆ ಹಾಗೂ ರಸ್ತೆ ನಿರ್ಮಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಬೀರೂರು ಪುರಸಭೆ ವ್ಯಾಪ್ತಿಯಲ್ಲಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಪಟ್ಟಣದ ಪೊಲೀಸ್ ಚೌಕಿ ಬಳಿ ಡಾ. ಬಿ.ಆರ್.ಅಂಬೇಡ್ಕರ್ ಕಂಚಿನ ಪುತ್ಥಳಿ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಅದು ಸಾಧ್ಯವಾಗದಿದ್ದರೆ ಸ್ವಯಂ ಪ್ರೇರಿತವಾಗಿ ನಿರ್ಮಿಸಲಾಗುವುದು ಎಂದರು.

ಚುನಾವಣೆ ಸಂದರ್ಭದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದಾಗ ಜಯಗಳಿಸುವಂತೆ ಸ್ವಾಮಿ ಅನುಗ್ರಹಿಸಿತ್ತು. ಅಲ್ಲದೆ ಆ ಸಂದರ್ಭದಲ್ಲಿ ಭಕ್ತರ ಒತ್ತಾಯದಂತೆ ಪಾದದಕೆರೆಗೆ ಸರಿಯಾದ ರಸ್ತೆ ಇಲ್ಲದಿರುವ ಬಗ್ಗೆ ತಿಳಿಸಿದ್ದರು. ಗೆದ್ದ ಬಳಿಕ ಪಾದದಕೆರೆಗೆ ಸೇತುವೆ ಹಾಗೂ ರಸ್ತೆ ನಿರ್ಮಾಣ ಮಾಡುವ ಮಾತು ನೀಡಿದ್ದೆ. ಅದರಂತೆ ಸೇತುವೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಸ್ವಾಮಿಯ ಅಪ್ಪಣೆ ದೊರೆತಿದೆ. ಮುಂದಿನ ದಿನಗಳಲ್ಲಿ ಪಟ್ಟಣದ ಸರಸ್ವತಿಪುರಂ ಬಡಾವಣೆಯ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಕಬ್ಬಿಣದ ಶೀಟ್‌ನಿಂದ ಮೇಲ್ಛಾವಣಿ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ಬೀರೂರು ಪುರಸಭೆ ಸದಸ್ಯ ಬಿ.ಕೆ.ಶಶಿಧರ್, ಎಲೆ ರವಿಕುಮಾರ್, ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಎಂ.ಪಿ.ವಿಶ್ವನಾಥ ಆಚಾರ್, ಕಾರ್ಯದರ್ಶಿ ಶಿವಣ್ಣ, ಗೌಡರಾದ ದಕ್ಷಿಣಮೂರ್ತಿ, ಜಯಣ್ಣ, ಬಿ.ಜಿ.ಮೈಲಾರಪ್ಪ, ನಿವೃತ್ತ ಆರ್‌ಎಂಎಸ್ ನಾಗರಾಜ್, ಜೋಡಿತಿಮ್ಮಾಪುರ ಗ್ರಾಪಂ ಅಧ್ಯಕ್ಷ ಆನಂದ್, ಹುಲ್ಲೇಹಳ್ಳಿ ಗ್ರಾಪಂ ಉಪಾಧ್ಯಕ್ಷ ಲಕ್ಷ್ಮಣ್, ಬಳ್ಳಿಗನೂರು ಚೌಡಪ್ಪ, ದೇವಾಸ್ಥಾನ ಸಮಿತಿಯ ವಿನೋದ, ಕುಮಾರಸ್ವಾಮಿ, ಸಿದ್ದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net