

ರಾಯಚೂರು: ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಮತ್ತು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ನವ ಭಾರತ ಹಿಂದೂ ದಲಿತ ಸಂಘಟನೆ ನೇತೃತ್ವದಲ್ಲಿ ಮಹಿಳೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಹಟ್ಟಿಯಿಂದ ಕಾಲ್ನಡಿಗೆ ಜಾಥಾ ಮೂಲಕ ನಗರಕ್ಕೆ ಆಗಮಿಸಿ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಪಟ್ಟಣದಲ್ಲಿ ಕುಡಿಯುವ ನೀರಿಗೆ ಜನರು ಸಮಸ್ಯೆ ಎದುರಿಸುತ್ತಿದ್ದು, 15 ದಿನದೊಳಗೆ ಸಮರ್ಪಕ ನೀರು ಸರಬರಾಜಿಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಿಂದೂ ರುದ್ರಭೂಮಿಗೆ ಸ್ಥಳ ನಿಗದಿಪಡಿಸಬೇಕು. ಪಟ್ಟಣಕ್ಕೆ ಮಂಜೂರಾಗಿರುವ ಬಸ್ ಡಿಪೋ ಕಾಮಗಾರಿಯನ್ನು ಕಾರ್ಯಾರಂಭ ಮಾಡಬೇಕು. ಲಿಂಗಸುಗೂರಿನಿಂದ ಕಲಬುರಗಿಗೆ ತೆರಳುವ ಸಾರಿಗೆ ಸಂಸ್ಥೆ ಬಸ್‌ಗಳು ಹಟ್ಟಿ ಮಾರ್ಗವಾಗಿ ಸಂಚರಿಸುವಂತೆ ಮಾಡಬೇಕು.
ಹಟ್ಟಿ ಪಟ್ಟಣ ಕೇಂದ್ರವಾಗಿಟ್ಟುಕೊಂಡು ನೂತನ ತಾಲೂಕು ರಚನೆ ಮಾಡಬೇಕು. ಪಟ್ಟಣದಲ್ಲಿ ಡಿಪ್ಲೋಮಾ ಇನ್ ಮೈನಿಂಗ್ ಇಂಜಿನಿಯರಿಂಗ್ ಕಾಲೇಜು ಆರಂಭಿಸಬೇಕು. ಹೈಟೆಕ್ ಗ್ರಂಥಾಲಯ ನಿರ್ಮಾಣ ಮಾಡಬೇಕು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ವಿನೋದಕುಮಾರ, ಪದಾಕಾರಿಗಳಾದ ಅಮರೇಶ, ವೆಂಕಟೇಶ, ಭೀಮರಾಯ ಭಜಂತ್ರಿ, ಯಂಕೋಬ ಪವಾಡೆ ಹಾಗೂ ಪಟ್ಟಣದ ಮಹಿಳೆಯರು ಪಾಲ್ಗೊಂಡಿದ್ದರು.