ಶಾಲೆಯಿಂದ ಹೊರಗುಳಿದ 67 ಮಕ್ಕಳು

Published on

ಚಾಮರಾಜನಗರ: ಪ್ರಾಥಮಿಕ ಶಿಕ್ಷಣ ಮಗುವಿನ ಮೂಲಭೂತ ಹಕ್ಕಾಗಿದೆ. ಒಂದೇ ಒಂದು ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು. ಆದರೆ, ಗಡಿಜಿಲ್ಲೆ ಚಾಮರಾಜನಗರದಲ್ಲಿ 67 ಮಕ್ಕಳು ಶಾಲೆಯಿಂದ ಹೊರಗುಳಿದಿವೆ.

ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಹನೂರು ತಾಲೂಕಿನಲ್ಲಿ 63, ಚಾಮರಾಜನಗರ ತಾಲೂಕಿನಲ್ಲಿ 15 ಮತ್ತು ಕೊಳ್ಳೇಗಾಲ ತಾಲೂಕಿನಲ್ಲಿ 15, ಗುಂಡ್ಲುಪೇಟೆ ತಾಲೂಕಿನಲ್ಲಿ 5, ಯಳಂದೂರು ತಾಲೂಕಿನಲ್ಲಿ 5 ಸೇರಿ ಒಟ್ಟು 103 ಮಕ್ಕಳು ಸರ್ವೆ ವೇಳೆ ಶಾಲೆ ಬಿಟ್ಟಿರುವು ಮಾಹಿತಿ ಸಿಕ್ಕಿದೆ. ಇವರಲ್ಲಿ ಹನೂರು ತಾಲೂಕಿನಲ್ಲಿ 24, ಚಾಮರಾಜನಗರ ತಾಲೂಕಿನಲ್ಲಿ 5, ಕೊಳ್ಳೇಗಾಲ ತಾಲೂಕಿನಲ್ಲಿ 3, ಯಳಂದೂರು ತಾಲೂಕಿನಲ್ಲಿ 3, ಗುಂಡ್ಲುಪೇಟೆ ತಾಲೂಕಿನಲ್ಲಿ 1 ಸೇರಿ ಒಟ್ಟು 36 ವಿದ್ಯಾರ್ಥಿಗಳು ಶಾಲೆಗೆ ದಾಖಲು ಮಾಡಿ ಮುಖ್ಯವಾಹಿನಿಗೆ ಬಂದಿದ್ದಾರೆ. ಉಳಿದಂತೆ ಹನೂರು ತಾಲೂಕಿನಲ್ಲಿ 39, ಕೊಳ್ಳೇಗಾಲ ತಾಲೂಕಿನಲ್ಲಿ 12, ಚಾಮರಾಜನಗರ ತಾಲೂಕಿನಲ್ಲಿ 10, ಗುಂಡ್ಲುಪೇಟೆ ತಾಲೂಕಿನಲ್ಲಿ 4, ಯಳಂದೂರು ತಾಲೂಕಿನಲ್ಲಿ 2 ಸೇರಿ ಒಟ್ಟು 67 ವಿದ್ಯಾರ್ಥಿಗಳು ಇನ್ನೂ ಸಹ ಶಾಲೆಗಳಿಂದ ಹೊರಗೆ ಉಳಿದಿದ್ದಾರೆ.

ಹೊರಗುಳಿಯಲು ಕಾರಣಗಳೇನು?:

ಜಿಲ್ಲೆಯಲ್ಲಿ 67 ಮಕ್ಕಳು ಶಾಲೆಯಿಂದ ಹೊರಗುಳಿಯಲು ಹಲವು ಕಾರಣಗಳನ್ನು ಶಿಕ್ಷಣ ಇಲಾಖೆ ಕಂಡುಕೊಂಡಿದೆ. ಇದರಲ್ಲಿ ಪ್ರಮುಖವಾಗಿ ಮಕ್ಕಳ ಪಾಲಕರು ಉದ್ಯೋಗಕ್ಕಾಗಿ ಒಂದುಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುತ್ತಿರುವುದರಿಂದ ಕೆಲವು ಮಕ್ಕಳು ಶಾಲೆಯಿಂದ ಹೊರಗುಳಿಯಲು ಕಾರಣವಾಗಿದೆ. ಅನಾರೋಗ್ಯದ ಕಾರಣದಿಂದಲೂ ಕೆಲವು ಮಕ್ಕಳು ಶಾಲೆಯಿಂದ ಹೊರಗುಳಿದಿವೆ. ಕೌಟುಂಬಿಕ ಸಮಸ್ಯೆಯ ಕಾರಣಕ್ಕೂ ಶಿಕ್ಷಣದಿಂದ ದೂರು ಉಳಿದಿವೆ. ಇದರಲ್ಲಿ ಮುಖ್ಯವಾಗಿ ವಯೋಮಿತಿ ಮೀರಿರುವ ಹಿನ್ನೆಲೆಯಲ್ಲಿ ಪ್ರೌಢಶಾಲೆಯ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳೂ ಇದ್ದಾರೆ. ಒಟ್ಟಾರೆಯಾಗಿ, ವಲಸೆ, ಅನಾರೋಗ್ಯ, ವಯೋಮಿತಿ ಮೀರಿದ ಮಕ್ಕಳು, ಕೌಟುಂಬಿಕ ಸಮಸ್ಯೆ ಕಾರಣಕ್ಕೆ ಮಕ್ಕಳು ಶಾಲೆಯಿಂದ ಹೊರಗುಳಿದಿವೆ.

ಹನೂರಿನಲ್ಲೇ ಹೆಚ್ಚು:

ಶಾಲೆಯಿಂದ ಹೊರಗುಳಿದಿರುವ ಮಕ್ಕಳಲ್ಲಿ ಹನೂರು ತಾಲೂಕಿನಲ್ಲೇ ಹೆಚ್ಚು ಮಕ್ಕಳಿದ್ದಾರೆ. ಈ ತಾಲೂಕಿನಲ್ಲಿ ಮನೆ ಮನೆ ಸರ್ವೆ ನಡೆಸಿದ ವೇಳೆ 63 ಮಕ್ಕಳು ಪತ್ತೆಯಾಗಿದ್ದರು. ಇದರಲ್ಲಿ 24 ಮಕ್ಕಳನ್ನು ಶಾಲೆಗೆ ಸೇರಿಸಿ ಮುಖ್ಯವಾಹಿನಿಗೆ ತರಲಾಗಿದೆ. ಉಳಿದಂತೆ 39 ಮಕ್ಕಳು ಇನ್ನೂ ಸಹ ಶಾಲೆಯಿಂದ ಹೊರಗಳಿದಿವೆ. ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಸಿದರೆ ಹನೂರು ತಾಲೂಕಿನಲ್ಲಿ ಅಧಿಕ ಸಂಖ್ಯೆಯಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಇಲ್ಲಿನ ಶೈಕ್ಷಣಿಕ ವ್ಯವಸ್ಥೆ, ಜನಜೀವನದ ಸ್ಥಿತಿಗತಿಯತ್ತ ಬೆಳಕು ಚೆಲ್ಲುತ್ತಿದೆ. ಕರ್ನಾಟಕ-ತಮಿಳುನಾಡು ರಾಜ್ಯಗಳ ಗಡಿಯಲ್ಲಿರುವ ಹನೂರು ತಾಲೂಕು ಪ್ರಾಕೃತಿಕವಾಗಿ ಶ್ರೀಮಂತಿಕೆಯ ತಾಲೂಕಾಗಿದೆ. ರಾಜ್ಯದಲ್ಲೇ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಮಲೆ ಮಹದೇಶ್ವರ ಬೆಟ್ಟವಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಮಳೆಯಾಶ್ರಿತ ಕೃಷಿ ಭೂಮಿ ಕೈ ಹಿಡಿಯುತ್ತಿಲ್ಲ. ರೈತರು, ಕೂಲಿಕಾರರ ಆರ್ಥಿಕ ಮಟ್ಟ ಸಧೃಡವಾಗಿಲ್ಲ. ಬಡಜನರು ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಉದ್ಯೋಗ ಅರಸಿ ವಲಸೆ ಹೋಗುವುದು ನಡೆಯುತ್ತಲೇ ಇದೆ. ಶಾಲೆಗೆ ಬಿಟ್ಟ ಬಳಿಕ ವಯೋಮಿತಿ ಮೀರಿ ಮರಳಿ ಶಾಲೆಗೆ ಸೇರಲು ಆಗುತ್ತಿಲ್ಲ. ಇದೆಲ್ಲರ ಪರಿಣಾಮ ಮಕ್ಕಳ ಶಿಕ್ಷಣದ ಮೇಲೂ ಪರಿಣಾಮ ಬೀರುತ್ತಿದೆ.

ಕಳಪೆ ಸಾಧನೆ:

ಹಿಂದಿನ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹನೂರು ತಾಲೂಕು ಶೇ.57.74 ರಷ್ಟು ಫಲಿತಾಂಶ ಪಡೆದುಕೊಂಡು ಕಳಪೆ ಸಾಧನೆ ಮಾಡಿತ್ತು. ಕಳೆದ ಬಾರಿ ಶೇ.70.71ರಷ್ಟು ಫಲಿತಾಂಶವನ್ನು ಪಡೆದಿತ್ತು.

ಆದರೆ ಈ ಸಲ ಶೈಕ್ಷಣಿಕ ಸಾಧನೆ ಕಳಪೆಯಾಯಿತು. ಹನೂರು ತಾಲೂಕಿನಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಸೇರಿದಂತೆ ಒಟ್ಟು 43 ಪ್ರೌಢಶಾಲೆಗಳಿವೆ. ಈ ಬಾರಿ 1,018 ಬಾಲಕರು, 1,029 ಬಾಲಕಿಯರು ಸೇರಿದಂತೆ ಒಟ್ಟು 2,047 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 516 ಬಾಲಕರು, 666 ಬಾಲಕಿಯರು ಸೇರಿ ಒಟ್ಟು 1,182 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೈಕ್ಷಣಿಕ ವಲಯ ಈ ಬಾರಿ ಶೇಕಡ 57.74ರಷ್ಟು ಫಲಿತಾಂಶ ಪಡೆಯುವುದರ ಮೂಲಕ ಜಿಲ್ಲೆಯಲ್ಲಿಯೇ ಕೊನೆಯ ಸ್ಥಾನದಲ್ಲಿದೆ.

ಬಾಲಕರೇ ಅಧಿಕವಾಗಿದ್ದರು: ಶಾಲೆಯಿಂದ ಹೊರಗುಳಿದಿದ್ದ ಒಟ್ಟು 103 ಮಕ್ಕಳಲ್ಲಿ ಬಾಲಕರೇ ಅಧಿಕ ಸಂಖ್ಯೆಯಲ್ಲಿದ್ದರು. 103 ಮಕ್ಕಳಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಒಟ್ಟು 46 ಬಾಲಕಿಯರು ಶಾಲೆ ಬಿಟ್ಟಿದ್ದರೆ, 57 ಗಂಡು ಮಕ್ಕಳು ಶಾಲೆ ತೊರೆದಿದ್ದರು. ಶಿಕ್ಷಣ ಇಲಾಖೆಯಿಂದ ಶಾಲೆ ಬಿಟ್ಟಿರುವ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಕಾರ್ಯ ಮಾಡಲಾಗುತ್ತಿರುವುದರಿಂದಾಗಿ 36 ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಂತಾಗಿದೆ. ಇನ್ನು ಉಳಿದಿರುವ 67 ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಸೇರಿಸುವ ಕೆಲಸ ಮಾಡಲಾಗುತ್ತಿದೆ.

ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುತ್ತಿದ್ದೇವೆ. ವಲಸೆ ಹೋಗಿರುವವರು ಸಿಗುವುದಿಲ್ಲ. ಶಾಲೆ ಬಿಟ್ಟಿರುವ ವಯೋಮಿತಿ ಮೀರಿದ ಮಕ್ಕಳಿಗೆ ಖಾಸಗಿ ಅಭ್ಯರ್ಥಿಗಳಾಗಿ ಎಸ್‌ಎಸ್‌ಎಸ್‌ಸಿ ಪರೀಕ್ಷೆ ಕಟ್ಟಿಸಲಾಗುವುದು. ನಾಗೇಂದ್ರ, ಜಿಲ್ಲಾ ಯೋಜನ ಉಪ ಸಮನ್ವಯಾಧಿಕಾರಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net