ಶಾಲೆಯಲ್ಲಿ ರಂಗಗೀತೆ ಗಾಯನ

7-pnp 2
Published on

ಪಾಂಡವಪುರ: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ತಾಲೂಕಿನ ಚಿನಕುರಳಿ ಹೋಬಳಿ ಕಸಾಪ ಘಟಕದ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಜಿಲ್ಲಾ ಮಟ್ಟದ ರಂಗಗೀತೆ ಸ್ಪರ್ಧೆ ಹಾಗೂ ರಿದಂ ಸ್ಪೆಪ್ ಆಫ್ ಡಾನ್ಸ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಲೋಕಲ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸಿ.ಶಿವಕುಮಾರ್ ಕನ್ನಡ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ರಂಗಭೂಮಿ ಕಲಾವಿದರು ಹಾರ‌್ಮೋನಿಯಂ, ತಬಲ ಮತ್ತು ಕ್ಯಾಸಿನೋ ಸಂಗೀತದೊಂದಿಗೆ ರಂಗಗೀತೆಗಳನ್ನು ತಾಳ, ಲಯ ಮತ್ತು ಶ್ರುತಿಗೆ ತಕ್ಕಂತೆ ಹಾಡಿ ರಂಗಭೂಮಿ ಪ್ರೇಮಿಗಳ ಮನಗೆದ್ದರು.

ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಅಶೋಕ್ ಮಾತನಾಡಿ, ಯುವಕರು ಕ್ರಿಕೆಟ್ ಹಾಗೂ ಸಾಮಾಜಿಕ ಜಾಲತಾಣಗಳ ಮೇಲಿನ ವ್ಯಾಮೋಹದಿಂದ ರಂಗಭೂಮಿ ಕಲೆ ಮತ್ತು ಕಲಾವಿದರನ್ನು ಕಡೆಗಣಿಸುತ್ತಿದ್ದಾರೆ. ಆದರೆ ರಂಗ ಕಲಾವಿದರು ನಾಟಕ ಕಲೆಯನ್ನು ಇನ್ನೂ ಜೀವಂತವಾಗಿ ಉಳಿಸಿಕೊಂಡು ಬರುತ್ತಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಈಗಲೂ ರಂಗಭೂಮಿ ಕಲೆ ಜೀವಂತವಾಗಿದೆ. ರಂಗಕಲೆ, ಜಾನಪದ ಕಲಾಪ್ರಕಾರಗಳು, ಪೌರಾಣಿಕ, ಐತಿಹಾಸಿಕ ನಾಟಕಗಳು ನಮ್ಮ ಪರಂಪರೆಯ ಪ್ರತೀಕವಾಗಿವೆ ಎಂದರು.

ಸನ್ಮಾನ: ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು. ರಂಗಗೀತೆ ಸ್ಪರ್ಧೆಯಲ್ಲಿ ವಿಜೇತರಾದ ಕಲಾವಿದರಿಗೆ ಪಾರಿತೋಷಕ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net