ಕೋಲಾರ: ಪರೀಕ್ಷೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ವಿಷಯವಾರು ಶಿಕ್ಷಕರು ಇಲ್ಲದಿದ್ದರೆ ಮಕ್ಕಳ ಭವಿಷ್ಯ ಏನು? ನಾವು ಬಡವರಾದ ಕಾರಣ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸುತ್ತಿದ್ದೇವೆ. ಶಾಲೆಯಲ್ಲಿ ಬೋಧಿಸಲು ಶಿಕ್ಷಕರೇ ಇಲ್ಲದಿದ್ದರೆ ಹೇಗೆ ಎಂದು ಪಾಲಕರು ಪ್ರಶ್ನಿಸಿ ಮುದುವಾಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿಯನ್ನು ಸೋಮವಾರ ತರಾಟೆಗೆ ತೆಗೆದುಕೊಂಡರು.
ಶಾಲೆಯಲ್ಲಿ ಸಮಾಜ ಶಿಕ್ಷಕರಿಲ್ಲ, ಶೈಕ್ಷಣಿಕ ವರ್ಷದಿಂದಲೂ ಹಿಂದಿ ಶಿಕ್ಷಕರಿಲ್ಲ ಎಂದು ಆರೋಪಿಸಿ ಮುದುವಾಡಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸೋಮವಾರ ಬೆಳಗ್ಗೆ ಶಾಲೆಯ ಆವರಣದಲ್ಲಿ ಪ್ರತಿಭಟೆನೆಗೆ ಮುಂದಾದರು. ಬಳಿಕ ಮಕ್ಕಳ ಜತೆಗೆ ಪಾಲಕರು ಭಾಗವಹಿಸಿದರು.
ಮುಖ್ಯ ಶಿಕ್ಷಕಿ ರಹಿನಾಬಾನು ಅವರು ಬೆಳಗ್ಗೆ 10.30ಕ್ಕೆ ಶಾಲೆಗೆ ಆಗಮಿಸಿದಾಗ ಮಕ್ಕಳು ಧರಣಿ ಕುಳಿತಿರುವುದನ್ನು ಕಂಡು ಬೆರಗಾದರು. ಬಳಿಕ ಪಾಲಕರಾದ ಮಂಜುನಾಥ್ ರೆಡ್ಡಿ, ಶ್ರೀನಿವಾಸ್, ಮಂಜು, ಚೌಡಪ್ಪ ಮೊದಲಾದವರು ಮುಖ್ಯಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡರು. ಶಾಲೆಯಲ್ಲಿ ಇದ್ದ ಸಮಾಜ ವಿಜ್ಞಾನ ಅತಿಥಿ ಶಿಕ್ಷಕಿಯನ್ನು ಯಾಕೆ ತೆಗೆದಿದ್ದು, ಪರೀಕ್ಷೆಗಳು ಹತ್ತಿರಕ್ಕೆ ಬರುತ್ತಿವೆ. ಹಿಂದಿ ಶಿಕ್ಷಕರಿಲ್ಲ. ನೀವು ಈ ಶಾಲೆಗೆ ಬಂದ 6 ತಿಂಗಳಿನಿಂದ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆ ಎದುರಾಗುತ್ತಿವೆ ಎಂದು ಆರೋಪಿಸಿದರು.
ಮಕ್ಕಳಲ್ಲಿ ಧಾರ್ಮಿಕ ತಾರತಮ್ಯಮಾಡುತ್ತಿದ್ದೀರಿ, ಮಕ್ಕಳನ್ನು ದೇವಸ್ಥಾನಕ್ಕೆ ತೆರಳಲು ಬಿಡುತ್ತಿಲ್ಲ. ನೀವು ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆ ಮಾಡುತ್ತೀರಿ. ಆ ಬಗ್ಗೆ ನಾವು ಅಡ್ಡಿಪಡಿಸಿಲ್ಲ. ನಮ್ಮ ಮಕ್ಕಳು ದೇವಸ್ಥಾನಕ್ಕೆ ಹೋಗಲು ರಜೆ ಕೇಳಿದರೆ ಬಿಡುತ್ತಿಲ್ಲ. ಊಟ ಮಾಡಿಕೊಂಡು ಬರಲು ಬಿಡುತ್ತಿಲ್ಲ, ಪಾಲಕರು ಬಂದರೂ ಬಿಡುತ್ತಿಲ್ಲ. ಈ ರೀತಿ ತಾರತಮ್ಯ ಸರಿಯಿಲ್ಲ ಎಂದು ಮುಖ್ಯ ಶಿಕ್ಷಕಿಯನ್ನು ಪಾಲಕರಾದ ಮಂಜುನಾಥರೆಡ್ಡಿ ತೀವ್ರ ತರಾಟೆಗೆ ತೆಗೆದುಕೊಂಡರು.
ಅತಿಥಿ ಶಿಕ್ಷಕಿಯನ್ನು ವಾಪಸ್ ಕರೆಸಲು ಆಗ್ರಹ : ನಾನು ವಾರಗಳ ಕಾಲ ಮೈಸೂರಿಗೆ ತರಬೇತಿಗೆ ಹೋಗಿದ್ದೆ. ಇಲ್ಲಿನ ಸಮಸ್ಯೆ ನನಗೆ ಅರ್ಥವಾಗಿಲ್ಲ ಎಂದು ಮುಖ್ಯ ಶಿಕ್ಷಕಿ ತಿಳಿಸಿದಾಗ ಎಲ್ಲ ವಿಷಯವನ್ನು ತಿಳಿದುಕೊಳ್ಳುತ್ತಿದ್ದೀರಿ. ಇದ್ದ ಅತಿಥಿ ಶಿಕ್ಷಕಿಯನ್ನು ಯಾಕೆ ವಾಪಸ್ ಕಳುಹಿಸಿದ್ದೀರಿ. ಅವರನ್ನು ಮೊದಲು ಕರೆಸಿ ಎಂದು ಒತ್ತಾಯ ಪಡಿಸಿದರು. ಅದಕ್ಕೆ ಮುಖ್ಯ ಶಿಕ್ಷಕಿ ಕರೆಸುವುದಾಗಿ ಭರವಸೆ ನೀಡಿದರು. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕೆಂದು ಪಾಲಕರು ತಾಕೀತು ಮಾಡಿದಾಗ ಅದಕ್ಕೆ ಒಪ್ಪಿದ ಮುಖ್ಯ ಶಿಕ್ಷಕಿ ಮುಂದೆ ಇಂತಹ ತಪ್ಪುಗಳನ್ನು ಮಾಡದೆ ನಡೆದುಕೊಳ್ಳುವುದಾಗಿ ಭರವಸೆ ನೀಡಿದ ನಂತರ ಮಕ್ಕಳು ಮತ್ತು ಪೋಷಕರು ಪ್ರತಿಭಟನೆ ಅಂತ್ಯಗೊಳಿಸಿದರು.
ವಿದ್ಯಾರ್ಥಿಗಳಿಗೆ ಶಿಸ್ತು ಕಲಿಸಿ : 10 ವರ್ಷಗಳಿಂದ ಶಾಲೆಗೆ ಉತ್ತಮ ಫಲಿತಾಂಶ ಬರುತ್ತಿದೆ. ಈ ಹಿಂದೆ ಇದ್ದ ಮುಖ್ಯಶಿಕ್ಷಕರು ಮಕ್ಕಳಿಗೆ ಶಿಸ್ತು ಕಲಿಸುತ್ತಿದ್ದರು. ಮಕ್ಕಳು ಮನೆಗಳಿಗೆ ವಾಪಸ್ ಹೋಗುವ ತನಕ ಶಾಲೆಯ ಮುಂಭಾಗ ಪ್ರತಿ ಮಗುವನ್ನು ಫಾಲೋಅಪ್ ಮಾಡುತ್ತಿದ್ದರು, ಶಾಲೆ ಬಿಡುವುದೇ ತಡ ನೀವು ಬಸ್ ಹತ್ತಿ ಹೊರಟು ಹೋಗುತ್ತೀರಿ. ಮಕ್ಕಳು ಬೇಕರಿ ಅಂಗಡಿಗಳ ಮುಂದೆ ಓಡಾಡಿಕೊಂಡು ಇರುತ್ತಿದ್ದಾರೆ. ಈ ಹಿಂದೆ ಇದ್ದ ಮುಖ್ಯೋಪಾದ್ಯಾಯರು ಈ ರೀತಿ ಬಿಡುತ್ತಿರಲಿಲ್ಲ, ಮಕ್ಕಳಲ್ಲಿ ಶಿಸ್ತು ರೂಢಿಸಿದ್ದರು. ಈಗ ಅದು ಇಲ್ಲದಂತಾಗಿದೆ ಎಂದು ಪಾಲಕರು ಆರೋಪಿಸಿದರು.