ಶಾಲೆಯ ಮಾನ್ಯತೆ ಆದೇಶ ರದ್ದತಿಗೆ ಆಗ್ರಹ

Somanna
Published on

ಚಾಮರಾಜನಗರ: ತಾಲೂಕಿನ ಅಂಕನಶೆಟ್ಟಿಪುರ ಗ್ರಾಮದಲ್ಲಿರುವ ಪ್ರೇರಣಾ ವಿದ್ಯಾಸಂಸ್ಥೆ ಎಂಬ ಖಾಸಗಿ ಶಾಲೆಯನ್ನು ಇಲಾಖೆಯ ಅನುಮತಿ ಇಲ್ಲದೇ ಸ್ಥಳಾಂತರ ಮಾಡಿದ್ದು, ಈ ಶಾಲೆಯ ನವೀಕರಣದ ಆದೇಶವನ್ನು ರದ್ದು ಮಾಡಬೇಕು ಎಂದು ವೆಂಕಟಯ್ಯನಛತ್ರ ಗ್ರಾಮದ ಮುಖಂಡ ಸೋಮಣ್ಣ ಆಗ್ರಹಿಸಿದರು.

ಅಂಕನಶೆಟ್ಟಿಪುರ ಗ್ರಾಮದಲ್ಲಿ 2010-11 ನೇ ಸಾಲಿನಲ್ಲಿ ಪ್ರೇರಣಾ ವಿದ್ಯಾಸಂಸ್ಥೆಯ ಹೆಸರಿನಲ್ಲಿ ಖಾಸಗಿ ಶಾಲೆಯನ್ನು ಪ್ರಾರಂಭಿಸಲಾಗಿದ್ದು, ಸುಮಾರು 2-3 ವರ್ಷಗಳ ಕಾಲ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ನಡೆಯುತ್ತಿತ್ತು. ಬಳಿಕ ಈ ಶಾಲೆಯನ್ನು ಶಾಲಾ ಶಿಕ್ಷಣ ಇಲಾಖೆಯ ಯಾವುದೇ ಅನುಮತಿ ಇಲ್ಲದೇ, ವೆಂಕಟಯ್ಯನಛತ್ರ ಗ್ರಾಮಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆದರೂ 2025-26 ನೇ ಸಾಲಿಗೆ ನವೀಕರಣ ಮಾಡಲಾಗಿದ್ದುದ, ಕೂಡಲೇ ಅದರ ನವೀಕರಣ ಆದೇಶವನ್ನು ರದ್ದುಗೊಳಿಸಿ ಶಾಲೆಯನ್ನು ಅಂಕನಶೆಟ್ಟಿಪುರ ಗ್ರಾಮಕ್ಕೆ ಸ್ಥಳಾಂತರ ಮಾಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಶಿಕ್ಷಣ ಇಲಾಖೆಯ ಆದೇಶವಿಲ್ಲದೇ ಶಾಲೆಯನ್ನು ಸ್ಥಳಾಂತರ ಮಾಡಿದ್ದಾರೆ ಎಂದು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಬಿಇಓ ವರದಿಯನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸಲ್ಲಿಸಿದ್ದರು. ಆದರೂ ಮೇಲಾಧಿಕಾರಿಗಳು ಯಾವುದೇ ಕ್ರಮವಹಿಸಿಲ್ಲ. ಈ ವಿಚಾರವಾಗಿ ಹಲವಾರು ವರ್ಷಗಳಿಂದ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಅನುಮತಿ ಇಲ್ಲದೇ ಶಾಲೆ ನಡೆಸುತ್ತಿರುವ ವಿರುದ್ಧ ಕ್ರಮವಹಿಸದಿದ್ದರೇ, ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುತ್ತದೆ. ಮುಂದುವರಿದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಸಿದ್ದಯ್ಯನಪುರ ಗ್ರಾಮದ ಮುಖಂಡ ಡಿ.ಎಸ್.ಚನ್ನಂಜಯ್ಯ, ಶಿವಕುಮಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net