ಶಾಲೆಯ ಜಾಗ ಕಬಳಿಸುವ ಆರೋಪ: ಪ್ರತಿಭಟನೆ

ಶಾಲೆಯ ಜಾಗ ಕಬಳಿಸುವ ಆರೋಪ: ಪ್ರತಿಭಟನೆ
Published on

ಹಾಸನ : ಶಾಲೆಯ ಜಾಗ ಕಬಳಿಸುವ ದುರುದ್ದೇಶದಿಂದ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ತಡೆಯೊಡ್ಡಿ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿ ಆಲೂರು ತಾಲೂಕಿನ ಮಲ್ಲಾಪುರ ಗ್ರಾಮಸ್ಥರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಆಲೂರು ತಾಲೂಕು ಕೆ.ಹೊಸಕೋಟೆ ಹೋಬಳಿಯ ಮಲ್ಲಾಪುರ ಗ್ರಾಮಕ್ಕೆ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಮಂಜೂರಾಗಿದೆ. ಈ ಶಾಲೆ ಕಟ್ಟಡವನ್ನು ಗ್ರಾಮದ ಸರ್ವೇ ನಂ.103 ರಲ್ಲಿ ಮೀಸಲಿಟ್ಟಿರುವ 3.10 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿ, ಕಟ್ಟಡದ ಕಾಮಗಾರಿ ನಡೆಯುತ್ತಿದೆ.ಆದರೆ, ಪಕ್ಕದ ಜಮೀನಿನ ಮೋಹನ್ ಕುಮಾರ್ ಎಂಬುವರು ಕಾಮಗಾರಿ ನಡೆಯುತ್ತಿರುವ ವಸತಿ ಶಾಲೆಯ ಜಾಗದಲ್ಲಿ ತೋಟಕ್ಕೆ ಹೋಗಲು ರಸ್ತೆಗೆ ಜಾಗ ಬಿಟ್ಟುಕೊಡಬೇಕು ಎಂದು ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ಈ ಪ್ರದೇಶದಲ್ಲಿ ಯಾವುದೇ ನಕಾಶೆ ರಸ್ತೆ ಇಲ್ಲ. ಇದಲ್ಲದೆ ಇವರ ತೋಟಕ್ಕೆ ಹೋಗಲು ತೋಟದ ಎರಡು ಬದಿಯಲ್ಲಿ ವಿಶಾಲವಾದ ರಸ್ತೆ ಇದ್ದರೂ, ಶಾಲೆಯ ಜಾಗವನ್ನು ಕಬಳಿಸುವ ಉದ್ದೇಶದಿಂದ ಸರ್ಕಾರಿ ಶಾಲೆಯ ಕಾಮಗಾರಿ ನಡೆಯದಂತೆ ಅಡ್ಡಿಪಡಿಸುತ್ತಿದ್ದಾರೆ. ಆದ್ದರಿಂದ ತಾವು ಶಾಲೆಯ ಜಾಗದ ಸ್ಥಳ ಪರಿಶೀಲನೆ ಮಾಡಿ ಕಾಮಗಾರಿ ನಡೆಯಲು ಅವಕಾಶ ಮಾಡಿಕೊಡಬೇಕು. ಶಾಲೆಗೆ ಸೇರಿದ ಜಾಗವನ್ನು ಇವರು ಒತ್ತುವರಿ ಮಾಡಿರುತ್ತಾರೆ ಅದನ್ನು ಸಹ ಬಿಡಿಸಿಕೊಡಬೇಕೆಂದು ಒತ್ತಾಯಿಸಿ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ದಲಿತ ಮುಖಂಡ ಕೃಷ್ಣದಾಸ್ ಗ್ರಾಮಸ್ಥರಾದ ಮೋಹನ್‌ಕುಮಾರ್,ರಾಮು, ಅಣ್ಣೇಗೌಡ, ಅಣ್ಣಪ್ಪ, ಮಂಜು, ಸತೀಶ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net