ಶಾಲೆಯ ಆವರಣದಲ್ಲಿ ಹೊಂಡ

16kglphoto-4..
Published on

ಕೊಳ್ಳೇಗಾಲ : ತಾಲೂಕಿನ ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ನಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೋರ್‌ವೆಲ್ ಸುತ್ತ ಅಪಾಯಕಾರಿ ಹೊಂಡ ನಿರ್ಮಾಣವಾಗಿದೆ. ಶಾಲಾ ಮಕ್ಕಳಿಗೆ ಇದರಿಂದ ಅಪಾಯ ಸಂಭವಿಸುವ ಸಾಧ್ಯತೆಗಳಿವೆ. ಶಾಲೆಯಲ್ಲಿ 1ರಿಂದ 8ನೇ ತರಗತಿ ಕಲಿಯುವ ಮಕ್ಕಳಿದ್ದಾರೆ. ಈ ಭಾಗದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ 150ಕ್ಕೂ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಶಾಲೆಯ ಆವರಣದಲ್ಲಿ ಅಂಗನವಾಡಿ ಕೇಂದ್ರವೂ ಇದೆ. 20 ಕ್ಕೂ ಹೆಚ್ಚು ಚಿಣ್ಣರು ಇಲ್ಲಿದ್ದಾರೆ.
ಕಳೆದ ಐದಾರು ವರ್ಷಗಳ ಹಿಂದೆ ನೀರಿನ ವ್ಯವಸ್ಥೆಗಾಗಿ ಶಾಲೆಯ ಆವರಣದಲ್ಲೇ ಬೋರ್‌ವೆಲ್ ಕೊರೆಸಲಾಗಿತ್ತು. ಇದರಿಂದ ನೀರಿನ ಸಮಸ್ಯೆ ಬಗೆಹರಿಯಿತು. ಆದರೆ, ಬೋರ್‌ವೆಲ್ ಸುತ್ತ ಅಧಿಕ ಆಳವಿರುವ ಹೊಂಡ ಆರು ತಿಂಗಳಿನಿಂದ ಸೃಷ್ಟಿಯಾಗಿದೆ. ಮಳೆ ನೀರು ಹೊಂಡಕ್ಕೆ ಸೇರಿದೆ. ಕಳೆದ ಕೆಲ ತಿಂಗಳಿನಿಂದ ಬೋರ್‌ವೆಲ್‌ನಲ್ಲಿ ಮಣ್ಣು ಮಿಶ್ರಿತ ನೀರು ಬರುತ್ತಿದೆ. ಹಾಗಾಗಿ ಉಪಯೋಗಿಸುವುದನ್ನು ಬಿಡಲಾಗಿದೆ. ಆದರೆ, ಬೋರ್‌ವೇಲ್ ಸುತ್ತ ನಿರ್ಮಾಣವಾಗಿರುವ ಹೊಂಡಕ್ಕೆ ಆಯತಪ್ಪಿ ಬಿದ್ದರೆ ಅವಘಢ ಸಂಭವಿಸಬಹುದು. ಈ ಆತಂಕಕ್ಕೆ ಒಳಗಾದ ಪಾಲಕರು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಈ ಹೊಂಡದ ಮಗ್ಗುಲಲ್ಲೇ ಅಂಗನವಾಡಿ ಕೇಂದ್ರವಿದೆ. ಮಕ್ಕಳು ಇಲ್ಲಿಂದಲೇ ಅಂಗನವಾಡಿ ಕೇಂದ್ರಕ್ಕೆ ತೆರಳಬೇಕಾಗಿದೆ. ಈ ಬಗ್ಗೆ ಎಚ್ಚತ್ತು ಹೊಂಡ ಮುಚ್ಚಿಸದಿದ್ದರೆ ಅಪಾಯ ಸಂಭವಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net