ಶಾಲೆಗೆ ಬೇಕು ದುರಸ್ತಿ ಭಾಗ್ಯ

21_NAREGAL_ABBIGERE SCHOOL 5
Published on

ನರೇಗಲ್ಲ: ಸಹಸ್ರಾರು ಮಕ್ಕಳ ಬಾಳು ಬೆಳಗಿದ ಶತಮಾನದಂಚಿನ ಅಬ್ಬಿಗೇರಿಯ ಸರ್ಕಾರಿ ಶಾಲೆ ಇದೀಗ ಶಿಥಿಲಾವಸ್ಥೆ ತಲುಪಿದೆ.
ಕೆಲವೇ ದಿನಗಳಲ್ಲಿ ಶತಮಾನದ ಸಂಭ್ರಮ ಆಚರಿಸಿಕೊಳ್ಳಲು ಅಣಿಯಾಗಿರುವ ಬಾಲಕರ ಮಾದರಿ ಕೇಂದ್ರ ಶಾಲೆಯ ಮೇಲ್ಛಾವಣಿಯ ಹಂಚುಗಳು ಒಡೆದು ಹೋಗಿವೆ. ಬಾಗಿಲು, ಕಿಟಕಿಗಳು ಮುರಿದಿವೆ. ಮಳೆಯಾದರೆ ಸಾಕು ನೀರೆಲ್ಲ ಕೋಣೆಯೊಳಗೆ ಬರುತ್ತದೆ. ಅಲ್ಲದೆ, ಬಿಸಿಲು, ಗಾಳಿಗೆ ಶಾಲಾ ಕೊಠಡಿಯಲ್ಲಿ ಕುಳಿತುಕೊಳ್ಳಲಾಗದ ಪರಿಸ್ಥಿತಿ. ಹಂಚುಗಳು ಯಾವ ಸಂದರ್ಭದಲ್ಲಾದರೂ ತರಗತಿಯ ಕೋಣೆಯೊಳಗೆ ಬೀಳುವ ಆತಂಕ ಸೃಷ್ಟಿಸಿದೆ. ಹೀಗಾಗಿ ತರಗತಿ ಆರಂಭವಾದರೆ ಸಾಕು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.
1875 ಮೇ 5ರಂದು ಆರಂಭವಾದ ಈ ಶಾಲೆಯು ಮೊದಲು ಗ್ರಾಮದ ಗುಡಿ ಗುಂಡಾರದಲ್ಲಿ ನಡೆಯುತ್ತಿತ್ತು. 1922 ಡಿಸೆಂಬರ್ 22 ರಲ್ಲಿ ಸ್ವಂತ ಕಟ್ಟಡದ (ಸದ್ಯ ಶಿಥಿಲಗೊಂಡಿರುವ ಕಟ್ಟಡ) ಶಂಕುಸ್ಥಾಪನೆಯಾಯಿತು. ಈ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ.
ಶಾಲೆಯ ಅಭಿವೃದ್ಧಿಗಾಗಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ನಿಜಕ್ಕೂ ಶೋಚನೀಯವ ಸಂಗತಿ ಎನ್ನುತ್ತಾರೆ ಶಾಲೆಯ ಹಳೆಯ ವಿದ್ಯಾರ್ಥಿಗಳು. ಈ ಶಾಲೆಯಲ್ಲಿ ಸಾವಿರಾರು ಶಿಕ್ಷಕರು ಸೇವೆ ಸಲ್ಲಿಸಿದ್ದಾರೆ. ಡಾ. ಗೋವಿಂದರಾಜ ಗಿರಡ್ಡಿ, ಸೋಮಶೇಖರ ಇಬ್ರಾಹಿಂಪೂರ, ಸಿ.ಜೆ. ಸವಣೂರಮಠ, ಬಿ.ಎಸ್. ಆರಡ್ಡಿ ಸೇರಿದಂತೆ ಅನೇಕ ಗಣ್ಯರು, ಕವಿಗಳು, ಸಾಹಿತಿಗಳು, ಮೇಧಾವಿಗಳು, ಅಧಿಕಾರಿಗಳು, ರಾಜಕಾರಣಿಗಳ ಭವಿಷ್ಯ ರೂಪಿಸಿದ ಈ ಶಾಲೆ ಇಂದು ಬೀಳುವ ಸ್ಥಿತಿಯಲ್ಲಿದೆ. ಈಗ ಕರೊನಾ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಘೊಷಿಸಲಾಗಿದ್ದು ಇದು ದುರಸ್ತಿಗೆ ಸಕಾಲವಾಗಿದೆ.

ಅಬ್ಬಿಗೇರಿ ಸರ್ಕಾರಿ ಶಾಲೆಯು ಜನಪ್ರತಿನಿಧಿಗಳ, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಂದ ಅವಸಾನದ ಅಂಚಿಗೆ ತಲುಪಿದೆ. ಶಾಲೆಯನ್ನು ದುರಸ್ತಿ ಮಾಡುವಂತೆ ಅನೇಕ ಬಾರಿ ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾರೊಬ್ಬರೂ ಇತ್ತ ಗಮನ ಹರಿಸಿಲ್ಲ. ಈಗ ಕರೊನಾ ಹಿನ್ನಲೆಯಲ್ಲಿ ಶಾಲೆಗಳು ರಜೆ ಇರುವುದರಿಂದ ಶಾಲೆಯನ್ನು ದುರಸ್ತಿಗೊಳಿಸಲು ಸೂಕ್ತ ಸಮಯವಾಗಿದೆ. ಮುಂಬರುವ ದಿನಗಳಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಶಾಲೆಯ ಶತಮಾನೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗುತ್ತದೆ. ಆದ್ದರಿಂದ, ಶಾಲೆಯ ದುರಸ್ತಿ ಕಾರ್ಯ ಕೈಗೊಂಡು ಶೀಘ್ರ ಮುಗಿಸಬೇಕು.| ಬಸವರಾಜ ಪಲ್ಲೇದ ಶಾಲೆಯ ಹಳೆಯ ವಿದ್ಯಾರ್ಥಿ ಅಬ್ಬಿಗೇರಿಅಬ್ಬಿಗೇರಿಯ ಸರ್ಕಾರಿ ಬಾಲಕರ ಮಾದರಿ ಕೇಂದ್ರ ಶಾಲೆಯ ದುರಸ್ತಿಗಾಗಿ ಅನುದಾನ ನೀಡುವಂತೆ ಈಗಾಗಲೇ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ಶಾಲೆಯ ದುರಸ್ತಿ ಕಾರ್ಯ ಪ್ರಾರಂಭಿಸಲಾಗುತ್ತದೆ.| ಗಾಯತ್ರಿ ಸಜ್ಜನ, ಕ್ಷೇತ್ರ ಶಿಕ್ಷಣಾಧಿಕಾರಿ ರೋಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net