ಶಾಲೆಗೆ ಪೀಠೋಪಕರಣಗಳ ಕೊಡುಗೆ

23 SARAG 2
Published on

ಸರಗೂರು: ಯುಎಸ್ ಟೆಕ್ನಾಲಜಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ 15 ಲಕ್ಷ ರೂ. ಮೌಲ್ಯದ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿದೆ ಎಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ನಾಗೇಶ್ ತಿಳಿಸಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ)ದಲ್ಲಿ ಶುಕ್ರವಾರ ಆಯೋಜಿಸಿದ್ದ ಪೀಠೋಕರಣಗಳ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯುಎಸ್ ಟೆಕ್ನಾಲಜಿ ಸಂಸ್ಥೆಯು ನಮ್ಮ ಶಾಲೆಯ ಅಭಿವೃದ್ಧಿಗಾಗಿ 50 ಡೆಸ್ಕ್, 100 ಲಾಕ್ ಟೇಬಲ್, 15 ಟೀಚರ್ ಟೇಬಲ್, 3 ಬೀರು, 3 ಆಫೀಸ್ ಟೇಬಲ್, 6 ಕಾಟ್, 50 ಚೇರ್‌ಗಳನ್ನು ಒದಗಿಸಿದೆ. ಅಲ್ಲದೆ ಹೈಟೆಕ್ ಶೌಚಗೃಹ ನಿರ್ಮಾಣ ಮಾಡಿಕೊಡುವ ಬಗ್ಗೆ ಭರವಸೆ ನೀಡಿದೆ ಎಂದರು.

ಯುಎಸ್ ಸಂಸ್ಥೆ ಮುಖ್ಯಸ್ಥ ಕಿರಣ್‌ಕುಮಾರ್ ದೊರೆಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಜತೆಗೆ ಮಕ್ಕಳ ಓದಿಗೆ ಬೇಕಾದ ಅಗತ್ಯ ಪರಿಕರವನ್ನು ಒದಗಿಸಲು ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಅವಕಾಶವಿದೆ. ಹಾಗಾಗಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿವಿಧ ಯೋಜನೆಯನ್ನು ಕೈಗಾರಿಕೆ ಹಾಗೂ ಕಂಪನಿಗಳು ರೂಪಿಸಿಕೊಂಡಿವೆ. ಖಾಸಗಿ ಶಾಲೆಯಲ್ಲಿ ಸಿಗುವ ಹೆಚ್ಚುವರಿ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳ ಮಕ್ಕಳು ಕೂಡ ಪಡೆಯಬೇಕೆನ್ನುವುದು ನಮ್ಮ ಆಶಯವಾಗಿದೆ ಎಂದರು.

ವಲಯ ಅರಣ್ಯಾಧಿಕಾರಿ ಮಧು ಮಾತನಾಡಿ, ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯಗಳನ್ನು ಸರ್ಕಾರ ನೀಡಲಿದೆ. ಅದರ ಜತೆಗೆ ಪಾಲಕರು ಹಾಗೂ ದಾನಿಗಳು ನೆರವು ನೀಡಿ ಸಹಕಾರ ನೀಡಬೇಕು ಎಂದರು.

ಸಂಸ್ಥೆಯ ಎಲ್ಲ ಸದಸ್ಯರನ್ನು ಇದೇ ವೇಳೆ ಅಭಿನಂದಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಭೀಮಯ್ಯ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯಿತಿ ಸದಸ್ಯರು ಚಲುವಕೃಷ್ಣ, ಶ್ರೀನಿವಾಸ, ಮುಖ್ಯಶಿಕ್ಷಕ ರಾಜು ಬಂಹಳ್ಳಿ, ಸಂಸ್ಥೆಯ ಸದಸ್ಯರಾದ ವಿಶ್ವಾಸ್, ರಾಜೀವ್, ವರುಣ್,ಪ್ರತಿಮಾ, ಸಂತೋಷ್, ಕಿರಣ್, ನಿತೀನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net