

ಬೇಲೂರು: ತಾಲೂಕಿನ ಅರೇಹಳ್ಳಿ ಕೇಶವ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಕಲಿಯಲು ಕಂಪ್ಯೂಟರ್ ವ್ಯವಸ್ಥೆ ಇಲ್ಲದ್ದನ್ನು ಮನಗಂಡು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಅರೇಹಳ್ಳಿಯ ವಿರೂಪಾಕ್ಷ ಎರಡು ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿದರು.
ಇಂದು ನಾವು ಎಷ್ಟೇ ವಿದ್ಯೆ ಕಲಿತರು ಕಂಪ್ಯೂಟರ್ ಜ್ಞಾನವಿಲ್ಲದಿದ್ದರೆ ಉಪಯೋಗವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಪ್ರತಿಯೊಂದು ಕ್ಷೇತ್ರವು ಡಿಜಿಟಲೀಕರಣಗೊಳ್ಳುತ್ತಿರುವ ಈ ಸಂದರ್ಭ ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಪ್ರಾಥಮಿಕ ಹಂತದಲ್ಲೇ ಕಂಪ್ಯೂಟರ್‌ಗಳ ಪರಿಚಯ ಮಾಡಿಕೊಡಬೇಕಿದೆ. ಅದರಲ್ಲೂ ನಮ್ಮ ಊರಿನ ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಹೊಂದಬೇಕು. ಸರ್ಕಾರಿ ಶಾಲಾ ಮಕ್ಕಳು ಯಾರಿಗೂ ಕಮ್ಮಿ ಇಲ್ಲದಂತೆ ಸ್ಪರ್ಧಾತ್ಮಕ ಯುಗದಲ್ಲಿ ಬದುಕಲು ತಂತ್ರಜ್ಞಾನದ ಅವಶ್ಯಕತೆ ಅರಿತು ವೈಯಕ್ತಿಕವಾಗಿ ಶಾಲೆಗೆ ಎರಡು ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಕುಮಾರ್, ಮುಖ್ಯಶಿಕ್ಷಕ ಕಾಂತರಾಜ್, ಅಂಬಿಕಾ ವಿರೂಪಾಕ್ಷ, ವಿರಾಜು, ಸತೀಶ್, ಹರೀಶ್, ರಮೇಶ್, ಗಣೇಶ್ ಇತರರಿದ್ದರು.