ಶಾಲೆಗಳಲ್ಲಿ ಮಕ್ಕಳ ಕಲವರಕ್ಕೆ ಕ್ಷಣಗಣನೆ

School
Published on

ಚಿತ್ರದುರ್ಗ: ಜಿಲ್ಲೆಯ ಸರ್ಕಾರಿ ಸೇರಿ ಅನೇಕ ಶಾಲೆಗಳು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿವೆ. ಅಕ್ಕರೆಯ ಮುದ್ದು ಮಕ್ಕಳನ್ನು ಭವ್ಯವಾಗಿ ಸ್ವಾಗತಿಸಲು ಆಯಾ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ತುದಿಗಾಲಲ್ಲಿ ಸನ್ನಧರಾಗಿದ್ದಾರೆ. ಪುಷ್ಪ ಮಳೆಗೈದು ವಿದ್ಯಾರ್ಥಿಗಳನ್ನು ಆವರಣದೊಳಗೆ ಬರಮಾಡಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ.

ಶುಕ್ರವಾರ ಅಧಿಕೃತವಾಗಿ ಆರಂಭವಾಗುವ ಶಾಲೆಗಳಿಗೆ ಶೈಕ್ಷಣಿಕ ಪರಿಕರಗಳೊಂದಿಗೆ ಮಕ್ಕಳನ್ನು ಕಳುಹಿಸಲು ಪಾಲಕರು ಸಕಲ ಸಿದ್ಧತೆ ಕೈಗೊಂಡಿದರೆ, ಅತ್ತ ಶಾಲೆಗಳು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿವೆ.

ಸತತ ಎರಡ್ಮೂರು ದಿನಗಳಿಂದಲೂ ಶಾಲೆಗಳ ಸ್ವಚ್ಛತೆಯಲ್ಲಿ ತೊಡಗಿರುವ ಸಿಬ್ಬಂದಿ ತಳಿರು, ತೋರಣ, ಪುಷ್ಪಗಳಿಂದ ಅತ್ಯಾಕರ್ಷವಾಗಿ ಅಲಂಕರಿಸಿ ಆರಂಭೋತ್ಸವ ಕಾರ್ಯಕ್ಕೆ ಶ್ರಮಿಸುತ್ತಿದ್ದಾರೆ.

ಜಿಲ್ಲೆ ಸೇರಿ ತಾಲೂಕಿನಾದ್ಯಂತ ಗುರುವಾರ ಕೂಡ ಹಲವು ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ಸೇರಿ ತಯಾರಿಗಳು ಜೋರಾಗಿ ನಡೆದವು. ಅಲ್ಲದೆ, ಆವರಣ ಶುಚಿತ್ವ ಕೈಗೊಳ್ಳಲಾಯಿತು. ಸಿಬ್ಬಂದಿ ತರಗತಿಯ ಕೊಠಡಿಗಳು, ಶೌಚಗೃಹಗಳನ್ನು ಸ್ವಚ್ಛಗೊಳಿಸುತ್ತಿದ್ದ ದೃಶ್ಯ ಬಹುತೇಕ ಶಾಲೆಗಳಲ್ಲಿ ಕಂಡುಬಂತು.

ಚಿತ್ರದುರ್ಗ ತಾಲೂಕಿನ ಕವಾಡಿಗರಹಟ್ಟಿ, ಜೆ.ಎನ್.ಕೋಟೆ, ದೊಡ್ಡಸಿದ್ದವ್ವನಹಳ್ಳಿ, ಇಂಗಳದಾಳ್, ಕಲ್ಲಹಳ್ಳಿ, ಜೆ.ಸಿ.ಹಳ್ಳಿ ಗೊಲ್ಲರಹಟ್ಟಿ, ಜೆ.ಸಿ.ಹಳ್ಳಿ, ಸಜ್ಜನಕೆರೆ, ಪಲ್ಲವಗೆರೆ, ಜೆ.ಎನ್.ಕೋಟೆ, ನರೇನಾಳು, ಕಳ್ಳಿರೊಪ್ಪ, ಕಲ್ಲಹಳ್ಳಿ, ದ್ಯಾಮವ್ವನಹಳ್ಳಿ, ಕಾಸಾವರಹಟ್ಟಿ, ಕುಂಚಿಗನಾಳ್, ಇಂಗಳದಾಳ್ ಸೇರಿ ವಿವಿಧ ಹಳ್ಳಿಗಳಲ್ಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರು, ಸಿಬ್ಬಂದಿ ಉತ್ಸಾಹ ಜೋರಾಗಿತ್ತು.

ಇದೇ ವೇಳೆ 2024-25ನೇ ಸಾಲಿಗೆ ಮಕ್ಕಳನ್ನು ದಾಖಲಿಸಿಕೊಳ್ಳುವ ಆಂದೋಲನಕ್ಕೂ ಶುಕ್ರವಾರ ಚಾಲನೆ ದೊರೆಯಲಿದೆ. ಶಾಲಾ ಆರಂಭೋತ್ಸವ ವೇಳೆ ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಸಮವಸ್ತ್ರ ಶೇ 100ರಷ್ಟು ಸರಬರಾಜು: ವಿದ್ಯಾವಿಕಾಸ ಯೋಜನೆಯ ಕಾರ್ಯಕ್ರಮದಡಿ ಒಂದು ಜೊತೆ ಸಮವಸ್ತ್ರ ಮೊದಲ ಹಂತದಲ್ಲಿ ಬರುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಎರಡೂ ಜೊತೆ ಬಹುಬೇಗ ಸರಬರಾಜಾಗಿದೆ. 1ರಿಂದ 10ನೇ ತರಗತಿವರೆಗೂ 59,836 ಬಾಲಕ, 59,114 ಬಾಲಕಿಯರು ಸೇರಿ ಒಟ್ಟು 1,18,950 ವಿದ್ಯಾರ್ಥಿಗಳಿದ್ದಾರೆ. 2 ಜೊತೆಯದ್ದು ಒಳಗೊಂಡು 2,37,900 ಸಮವಸ್ತ್ರ ಬಂದಿದ್ದು, ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಿಗೆ ಈಗಾಗಲೇ ಶೇ 100ರಷ್ಟು ಸರಬರಾಜು ಮಾಡಲಾಗಿದೆ ಎಂದು ಪ್ರಭಾರ ಡಿಡಿಪಿಐ ನಾಸಿರುದ್ದೀನ್ ಮಾಹಿತಿ ನೀಡಿದ್ದಾರೆ.

ಈಗಾಗಲೇ ಶಾಲೆಯಲ್ಲಿ ಮಕ್ಕಳನ್ನು ಸ್ವಾಗತಿಸಲು ಸಿದ್ಧತೆ ಪೂರ್ಣಗೊಳಿಸಲಾಗಿದೆ. ಬಹಳ ದಿವಸಗಳ ಬಳಿಕ ಮಕ್ಕಳನ್ನು ನೋಡುವುದೇ ಸೌಭಾಗ್ಯ. ಸಿಹಿಯೂಟ, ಪುಸ್ತಕ, ಸಮವಸ್ತ್ರ ವಿತರಣೆ ಮೂಲಕ ಮಕ್ಕಳನ್ನು ಸ್ವಾಗತಿಸುವ ಕಾರ್ಯಕ್ರಮವನ್ನು ಹಬ್ಬದ ರೀತಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಚಳ್ಳಕೆರೆ ಶಿಕ್ಷಕ ಸಂಘದ ನಿರ್ದೇಶಕ ಆರ್.ಸದಾಶಿವಯ್ಯ.

ಪಠ್ಯಪುಸ್ತಕ ಶೇ.71.69 ಪೂರೈಕೆ: ತಾಲೂಕು, ಪಠ್ಯಪುಸ್ತಕ ಶೀರ್ಷಿಕೆ ಸಂಖ್ಯೆ, ಬೇಡಿಕೆ, ಬಿಇಒಗಳಿಂದ ಸ್ವೀಕಾರ, ಸರಬರಾಜು, ಸ್ವೀಕಾರ, ಉಚಿತ ಮತ್ತು ಮಾರಾಟ ಮಾಡಬಹುದಾದ, ಶೇಕಡವಾರು ಮಾಹಿತಿ ಕ್ರಮವಾಗಿ ಇಂತಿದೆ. ಚಳ್ಳಕೆರೆ-430-5,86,507-1,35,415-4,26,140-1,05,013-76.49-89.14-72.66-77.55. ಚಿತ್ರದುರ್ಗ-463-5,76,184-2,45,057-4,20,969-2,01,991-76.79-89.64-73.06-82.43. ಹಿರಿಯೂರು-461-3,94,397-1,08,108-2,73,216-84,431-75.52-87.91-69.27-78.10. ಹೊಳಲ್ಕೆರೆ-411-2,62,929-97,520-1,89,084-79,999-75.92-88.97-71.91-82.03. ಹೊಸದುರ್ಗ-409-3,09,429-1,10,604-2,22,215-92,998-77.24-90.47-71.81-84.08. ಮೊಳಕಾಲ್ಮೂರು-453-3,48,899-41,431-2,45,067-31,911-74.80-87.61-70.24-77.02.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net