

ಬೇಲೂರು: ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ 10ನೇ ತರಗತಿಯ ಸಂಕಲನಾತ್ಮಕ ಮೌಲ್ಯಮಾಪನ-1 ಪರೀಕ್ಷೆಯ ಫಲಿತಾಂಶ ವಿಶ್ಲೇಶಣಾ ಪ್ರಗತಿ ಪರಿಶೀಲನೆ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ಹಾಗೂ ತಿಂಗಳ ಗುರಿ 5 ರ ಮೂರನೆ ಕಿರು ಪುಸ್ಕಕ ಬಿಡುಗಡೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ನೆರವೇರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಮಾತನಾಡಿ, ಈ ಸಾಲಿನ ಹತ್ತನೇ ತರಗತಿ ಫಲಿತಾಂಶವು ಗುಣಾತ್ಮಕವಾಗಿರಬೇಕು ಎಂಬ ನಿಟ್ಟಿನಲ್ಲಿ ಶಿಕ್ಷಕರ ಪ್ರಯತ್ನ ಸೀಮಿತ ಅವಧಿಗೆ ಮೀಸಲಾಗದೆ ಧೀರ್ಘಾವಧಿಯದಾಗಿರಬೇಕು. ಹತ್ತನೇ ತರಗತಿ ಫಲಿತಾಂಶಕ್ಕಾಗಿ ಹಲವು ಚಟುವಟಿಕೆಗಳ ನಡುವೆ ಕ್ರಿಯಾಶೀಲವಾಗಿ ಸಾಗುತ್ತಿರುವುದರಿಂದ ಈ ಬಾರಿ ಉತ್ತಮ ಫಲಿತಾಂಶ ಕಂಡಿತಾ ನಿಮ್ಮದಾಗಲಿದೆ. ಆದ್ದರಿಂದ ಶಾಲೆಗಳ ಮುಖ್ಯ ಶಿಕ್ಷಕರು ಹೆಚ್ಚಿನ ಸಮಯ ಶಾಲೆಯಲ್ಲಿ ಇರಬೇಕು. ಕಾರಣ ಮನೆ ಯಜಮಾನ ಮನೆಯಲ್ಲಿ ಕುಳಿತಿದ್ದರೂ ಸಹ ಅವರಿಗೂ ಮನೆಯ ನಿಯಮಗಳು ಒಳಪಟ್ಟಿರುತ್ತದೆ. ಅದೇ ರೀತಿ ಮುಖ್ಯ ಶಿಕ್ಷಕರು ಶಾಲೆಯಲ್ಲಿದ್ದರೆ ಆ ಶಾಲೆಯೂ ಶಾಲಾ ನಿಯಮಕ್ಕೊಳಪಟ್ಟು ನಡೆಯುತ್ತದೆ. ಅಲ್ಲದೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಉತ್ತಮ ಭಾಂದವ್ಯ ವೃದ್ಧಿ ಹಾಗೂ ವಿದ್ಯಾರ್ಥಿಗಳಲ್ಲಿ ಜ್ಞಾನವನ್ನು ತುಂಬುವ ಮೂಲಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಉತ್ತಮ ಫಲಿತಾಂಶಕ್ಕೆ ಭದ್ರ ಬುನಾದಿ ಹಾಕುವುದಕ್ಕಾಗಿ ಹೆಚ್ಚಿನ ಮುತುವರ್ಜಿ ವಹಿಸಿ ಮಹತ್ವಕಾಂಕ್ಷಿಯ ತಿಂಗಳ ಗುರಿ 5 ರ ಮೂರನೆಯ ಕಿರು ಪುಸ್ತಕವನ್ನೂ ಹೊರ ತರುತಿದ್ದೇವೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಓದಿನತ್ತ ಹಾಗೂ ವಿಷಯವಾರುಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಲಾಗುತ್ತಿದೆ. ಹಾಗೂ ಪ್ರತಿಯೊಂದು ಶಾಲೆಯ ಸಂಕಲನಾತ್ಮಕ ಪರೀಕ್ಷೆಯ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದೆ ಎಂದರು.
ಮುಖ್ಯೋಪಾಧ್ಯಯರ ಸಂಘದ ಅಧ್ಯಕ್ಷ ಮುಳ್ಳಯ್ಯ, ಬಿಆರ್‌ಸಿ ಶಿವಮರಿಯಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ.ಜಗಧೀಶ್, ಇಸಿಒಗಳಾದ ರವಿಕುಮಾರ್, ಶಿವಪ್ಪ, ಗೋಪಾಲ್, ಉಮೇಶ್, ಬಾಲಕಿಯರ ಪ್ರೌಢಶಾಲೆ ಮುಖ್ಯ ಶಿಕ್ಷಕ ಚಂದ್ರಶೇಖರ್ ಸೇರಿದಂತೆ ವಿವಿಧ ಇಲಾಖೆಗಳ ಅನುಷ್ಟಾನಾಧಿಕಾರಿಗಳಿದ್ದರು.