

ಕಲಬುರಗಿ: ಮಕ್ಕಳೇ ಅತಿಥಿಗಳು, ಗಣ್ಯರು, ಅವರಿಂದಲೇ ವೇದಿಕೆ ನಿರ್ವಹಣೆ, ಉದ್ಘಾಟನೆ, ಭಾಷಣ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ. ಇಂತಹ ಅಪರೂಪದ ಕಾರ್ಯಕ್ರಮ ನಡೆದಿದ್ದು ನಗರದ ಅಪ್ಪಾಜಿ ಗುರುಕುಲ ಶಾಲೆಯಲ್ಲಿ. ಮಕ್ಕಳ ದಿನಾಚರಣೆ ನಿಮಿತ್ತ ಗುರುವಾರ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳೇ ನಿರ್ವಹಣೆ ಮಾಡಿ, ಗಮನ ಸೆಳೆದರು.
ಅತಿಥಿಗಳಾಗಿ ಭಾಗವಹಿಸಿದ್ದ ವೈಷ್ಣವಿ ಉದನೂರ, ಅಪ್ಪಾಜಿ ಉದನೂರ ಜವಾಹರಲಾಲ್ ನೆಹರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಸಿಗೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ವೈಷ್ಣವಿ ಉದನೂರ, ವಿದ್ಯಾಭ್ಯಾಸದ ಜತೆಗೆ ತಂದೆ, ತಾಯಿ ಹೆಮ್ಮೆ ಪಡುವಂತೆ ಕೆಲಸ ಮಾಡಬೇಕು. ನೆಹರು ಅವರ ಆದರ್ಶ ಅಳವಡಿಸಿಕೊಳ್ಳಬೇಕು. ಓದಿನೊಂದಿಗೆ ಆಟೋಟಗಳಲ್ಲೂ ಭಾಗವಹಿಸಬೇಕು ಎಂದು ಸಲಹೆ ನೀಡಿದರು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಅತಿಥಿಯಾಗಿ ವಿದ್ಯಾರ್ಥಿಗಳಾದ ಶರಣು ಚೆಗಟ್ಟಿ, ರೇವಣಸಿದ್ದ ಪಾಟೀಲ್, ಸೃಜನ್ ಪೊದ್ದಾರ, ವೇದಾಂತ ಕಳೆಕರ, ಅಮೂಲ್ಯ ಮಾಲಿಪಾಟೀಲ್, ಪವಿತ್ರಾ ಕಣ್ಣಿ, ಸಿದ್ದಪ್ರಕಾಶ ಚವ್ಹಾಣ್ ಭಾಗವಹಿಸಿದ್ದರು.
ಸಂಸ್ಥೆ ಕಾರ್ಯದರ್ಶಿ ರಾಜಕುಮಾರ ಉದನೂರ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆ ಅಧ್ಯಕ್ಷೆ ಭಾಗಮ್ಮ ಉದನೂರ, ಶಿP್ಷÀಕರಾದ ಶಾಂತಾ, ಸುಧಾ, ಉಷಾ, ರಾಹುಲ್, ವೈಷ್ಣವಿ, ರಾಜೇಶ್ವರಿ ಸಾವಿತ್ರಿ.ಡಿ, ಸಾವಿತ್ರಿ.ಎಸ್. ಇತರರಿದ್ದರು. ಲತಾ ಸ್ವಾಗತಿಸಿದರು. ಅಭಿಲಾಷ ವಂದಿಸಿದರು. ವೈಷ್ಣವಿ ನಿರೂಪಣೆ ಮಾಡಿದರು.