

ಮೈಸೂರು: ಸಂಯೋಜನೆ ಹೆಸರಿನಲ್ಲಿ 4,200 ಸರ್ಕಾರಿ ಶಾಲೆ ಮುಚ್ಚಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯಿಂದ ನಗರದ ರಾಮಸ್ವಾಮಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಸಂಘಟನೆಯ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ರಾಜ್ಯ ಸರ್ಕಾರವು ಕಡಿಮೆ ಹಾಜರಾತಿ ಇರುವ ಸರ್ಕಾರಿ ಶಾಲೆಗಳನ್ನು ಇತರ ಶಾಲೆಗಳೊಂದಿಗೆ ಸಂಯೋಜಿಸುವ ನಿರ್ಧಾರ ಪ್ರಕಟಿಸಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸುಧಾರಣಾ ಸಮಿತಿಯನ್ನು ಸಹ ರಚಿಸಲಾಗಿದೆ. ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ರಾಜ್ಯದಲ್ಲಿ 4 ಸಾವಿರಕ್ಕೂ ಅಧಿಕ ಶಾಲೆಗಳು 10 ಮಕ್ಕಳಿಗಿಂತ ಕಡಿಮೆ ದಾಖಲಾತಿ ಇದೆ. ಈ ಶಾಲೆಗಳ ಭವಿಷ್ಯದ ಕುರಿತು ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ತಲೆದೊರಿದೆ. ಬಡಜನರ ಮಕ್ಕಳ ಶಿಕ್ಷಣದ ಆಶಾಕಿರಣವಾಗಿರುವ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಲ್ಯಾಣ್ ಮಾತನಾಡಿ, ರಾಜ್ಯದಲ್ಲಿ 6,000ಕ್ಕಿಂತ ಹೆಚ್ಚು ಏಕೋಪಾಧ್ಯಾಯ ಶಾಲೆಗಳಿವೆ. 50,000ಕ್ಕಿಂತ ಹೆಚ್ಚು ಶಿಕ್ಷಕರನ್ನು ನೇಮಕ ಮಾಡಿಕೊಂಡಿಲ್ಲ. ಶಾಲೆಗಳಲ್ಲಿ ಕನಿಷ್ಠ ಮೂಲ ಸೌಕರ್ಯ ಒದಗಿಸುವ ಕ್ರಮ ಕೈಗೊಳ್ಳದೆ, ಹಾಜರಾತಿ ಕಡಿಮೆಯಿರುವ ಶಾಲೆ ಮುಚ್ಚಲಾಗುತ್ತಿದೆ. ಇದು ನೆಗಡಿ ಬಂದರೆ ಮೂಗು ಕತ್ತರಿಸಿದಂತೆ!. ಈ ಅವೈಜ್ಞಾನಿಕ, ಜನವಿರೋಧಿ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ಆದ್ಯತೆಯ ಮೇರೆಗೆ ಸರ್ಕಾರವು ಶಿಕ್ಷಣಕ್ಕೆ ಬಜೆಟ್‌ನಲ್ಲಿ ಅನುದಾನ ನಿಗದಿಪಡಿಸಬೇಕು, ಸರ್ಕಾರಿ ಶಾಲೆಗಳನ್ನು ಸಂಯೋಜನೆಗೊಳಿಸುವ ಬದಲು ಹಾಜರಾತಿ ಕಡಿಮೆಯಿರುವ ಶಾಲೆಗಳನ್ನು ಅವಶ್ಯಕ ಸೌಲಭ್ಯ ನೀಡಿ ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ಶಾಲೆಗಳ ಮುಚ್ಚುವಿಕೆಯ ವಿರುದ್ಧ ಹೋರಾಟ ಸಂಘಟಿಸಲಾಗುವುದು. ಶಾಲೆಗಳಲ್ಲಿ ಹೋರಾಟದ ಸಮಿತಿ ರಚಿಸಿ, ಪಾಲಕರ ಸಭೆ ಸಂಘಟಿಸಲಾಗುವುದು. ಈ ಹೋರಾಟದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ಜಿಲ್ಲಾ ಅಧ್ಯಕ್ಷೆ ಚಂದ್ರಕಲಾ, ಕಾರ್ಯದರ್ಶಿ ನಿತಿನ್, ಉಪಾಧ್ಯಕ್ಷೆ ಸ್ವಾತಿ, ಪದಾಧಿಕಾರಿಗಳಾದ ಹೇಮಾ, ಚಂದನ, ಅಂಜಲಿ, ಅಭಿಷೇಕ, ದಿಶಾ, ನಂದೀಶ್ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.