

ಕಿಕ್ಕೇರಿ: ಹೋಬಳಿಯ ಗಂಗೇನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮುಂದೆ ಚರಂಡಿ ನೀರು ನಿಂತಲ್ಲೇ ನಿಂತು ಗಬ್ಬು ನಾರುತ್ತಿದ್ದು, ಮಕ್ಕಳು ಕಿರಿಕಿರಿ ಅನುಭವಿಸುವಂತಾಗಿದೆ.
ಗ್ರಾಮದ ಪ್ರವೇಶ ದ್ವಾರದಿಂದ ಶಾಲೆವರಿಗೆ ಮಾತ್ರ ರಸ್ತೆ ಹಾಗೂ ಒಳಚರಂಡಿ ನಿರ್ಮಿಸಿದ್ದು, ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಹೀಗಾಗಿ ಶಾಲೆ ಹಾಗೂ ಅಂಗನವಾಡಿ ಎದುರು ಚರಂಡಿ ನೀರು ನಿಲುಗಡೆಯಾಗಿದೆ. ಶಾಲೆಯಿಂದ ಮುಂದಕ್ಕೆ ರಸ್ತೆ ಹಾಗೂ ಚರಂಡಿಯಾಗದ ಕಾರಣ ಹಾಗೂ ಮುಂದಿನ ರಸ್ತೆಯವರು ಚರಂಡಿಗೆ ಮಣ್ಣು ಸುರಿದಿರುವುದರಿಂದ ಚರಂಡಿ ನೀರು ಸರಾಗವಾಗಿ ಹರಿಯದೆ ಶಾಲೆಯೊಳಗೆ ನುಗ್ಗುವಂತಾಗಿದೆ.
ಹೀಗಾಗಿ ಶಾಲೆ ಬಳಿ ಚರಂಡಿ ನೀರು ನಿಂತು ಗಬ್ಬು ನಾರುತ್ತಿದೆ. ಹೀಗಾಗಿ ಶಾಲೆಗೆ ಬರುವ ಮಕ್ಕಳು ಮೂಗು ಮುಚ್ಚಿಕೊಂಡು ತೆರಳುವಂತಾಗಿದೆ. ಶಾಲೆಯ ಅಕ್ಕಪಕ್ಕದ ಮನೆಯವರು ಸೊಳ್ಳೆಗಳ ಕಾಟದಿಂದ ಹಗಲು ವೇಳೆಯಲ್ಲಿಯೇ ವಾಸಿಸಲು ಯಾತನೆಪಡುವಂತಾಗಿದ್ದು, ಹಲವು ಮಕ್ಕಳಿಗೆ ಜ್ವರ ಕಾಡುತ್ತಿದೆ. ಹೀಗಾಗಿ ಕೆಲವು ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ.