ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತನ್ನಿ

DC Meeting
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ಗೈರಾಗದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

ಗುರುವಾರ ನಡೆದ 4ನೇ ತ್ರೈಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಶಾಲೆಯಿಂದ ಹೊರಗುಳಿಯಲು ನಿಖರ ಕಾರಣ ಪತ್ತೆ ಹಚ್ಚಿ. ಫಲಿತಾಂಶದ ಮೇಲೂ ಪರಿಣಾಮ ಬೀರಲಿದ್ದು, ಮುಖ್ಯವಾಹಿನಿಗೆ ತರಲು ವಿಶೇಷ ಅಭಿಯಾನ ಆಯೋಜಿಸಿ ಎಂದು ಸಲಹೆ ನೀಡಿದರು.

ಕಳೆದ ಬಾರಿಗಿಂತ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸಲು ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರ ಆಯೋಜಿಸಿ ಎಂದರು.

ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಮಾತನಾಡಿ, ಎಸ್ಸೆಸ್ಸೆಲ್ಸಿಯಲ್ಲಿ ಶೇ. 50ರಷ್ಟು ಕಡಿಮೆ ಫಲಿತಾಂಶ ಇರುವ ಶಾಲೆಗಳ ಮುಖ್ಯಶಿಕ್ಷಕರ ಸಭೆ ಕರೆದು ಚರ್ಚಿಸಲಾಗಿದ್ದು, ಫಲಿತಾಂಶ ಹೆಚ್ಚಳಕ್ಕೆ ಕ್ರಮವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸಮಿತಿ ಸದಸ್ಯ ಡಿ.ಓ.ಮುರಾರ್ಜಿ ಮಾತನಾಡಿ, ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸಂತ್ರಸ್ಥರ ಮನೆ, ಕಾಲನಿಗಳಿಗೆ ಭೇಟಿ ನೀಡಿ, ಧೈರ್ಯ ತುಂಬುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಪರಿಹಾರ ಮಂಜೂರು ಮಾತ್ರವಲ್ಲದೆ, ಸಂತ್ರಸ್ಥರಿಗೆ ಮೊದಲು ಅಧಿಕಾರಿಗಳು, ಸದಸ್ಯರನ್ನೊಳಗೊಂಡ ತಂಡ ಭೇಟಿ ನೀಡಿ ಧೈರ್ಯ ತುಂಬಿ. ಈ ಕುರಿತು ಜಾಗೃತಿ ಮೂಡಿಸಿ. ಅಲ್ಲದೆ, ಎಸ್ಸಿಇಪಿ-ಟಿಎಸ್‌ಪಿಯ ಶೇ. 100ರಷ್ಟು ಅನುದಾನ ಬಳಸಿಕೊಂಡು ಪ್ರಗತಿ ಸಾಧಿಸಿ ಎಂದು ಡಿಸಿ ತಾಕೀತು ಮಾಡಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಡಿವೈಎಸ್‌ಪಿ ದಿನಕರ್, ಜಿಲ್ಲಾ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿ.ಆನಂದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net