ಶಾಲೆ ಪುನರಾರಂಭಕ್ಕೆ ಸಿದ್ಧತೆ, ಮಕ್ಕಳನ್ನು ಸ್ವಾಗತಿಸಲು ಸಜ್ಜು

mcms
ಸಂಗ್ರಹ ಚಿತ್ರ
Published on

ಮೈಸೂರು: ಬೇಸಿಗೆ ರಜೆ ಮುಗಿದು ಶಾಲೆಗಳ ಪುನರಾರಂಭಕ್ಕೆ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ರಜೆಯ ಮೂಡ್‌ನಲ್ಲಿದ್ದ ಮಕ್ಕಳು ಈಗ ಶಾಲೆಗೆ ಮರಳಬೇಕಿದ್ದು, ಮೇ 31ರಂದು ಅದ್ದೂರಿಯಾಗಿ ಸ್ವಾಗತಿಸಲು ಶಾಲೆಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಈ ಶೈಕ್ಷಣಿಕ ವರ್ಷವನ್ನು ‘ಗುಣಾತ್ಮಕ ಶೈಕ್ಷಣಿಕ ವರ್ಷ’ ಎಂದು ಘೋಷಣೆ ಮಾಡಿದ್ದು, 2023-24ನೇ ಸಾಲಿನ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಆರಂಭಿಸಲು ಮೇ 29ರಂದು ಸಿದ್ಧತೆ ನಡೆಸಬೇಕು. ಮೇ 30ರಂದು ಪೂರ್ವಭಾವಿ ಸಭೆ ನಡೆಸಬೇಕು. ಮರುದಿನ ಸ್ಥಳೀಯ ಜನಪ್ರತಿನಿಧಿಗಳು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರನ್ನು ಆಹ್ವಾನಿಸಬೇಕು. ಶಾಲೆ ಮುಖ್ಯದ್ವಾರಕ್ಕೆ ತಳಿರು ತೋರಣ ಕಟ್ಟಿ ಡೋಲು, ನಗಾರಿ, ಎತ್ತಿನ ಗಾಡಿ ಮೂಲಕ ಮೆರವಣಿಗೆ ನಡೆಸಬೇಕು. ಮಕ್ಕಳಿಗೆ ಹೂ, ಸಿಹಿ ನೀಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ರಾಮರಾಜೇ ಅರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕದಿಂದ ಪ್ರೌಢಶಾಲೆವರೆಗೆ ಒಟ್ಟು 3,446 ಶಾಲೆಗಳಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಭಾಗದ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದಲ್ಲಿ ಹಾಜರಾಗಿ ಸಿದ್ಧತೆ ಪರಿಶೀಲಿಸಬೇಕು. ಸರ್ಕಾರ ಹಾಗೂ ಇಲಾಖೆ ನೀಡುವ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಲ್ಲ ಮುಖ್ಯಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದ್ದಾರೆ.
ಬೆಳಗ್ಗೆ 10ರಿಂದ ಸಂಜೆ 4.20ರವರೆಗೆ ಶಾಲಾ ಸಮಯಕ್ಕೆ ಅನುಗುಣವಾಗಿ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಬೇಕು. ಹಿಂದಿನ ಶೈಕ್ಷಣಿಕ ವರ್ಷದ ಫಲಿತಾಂಶವನ್ನು ಎಸ್‌ಎಟಿಎಸ್ ತಂತ್ರಾಂಶದಲ್ಲಿ ದಾಖಲಿಸಿ ವಿದ್ಯಾರ್ಥಿಗಳಿಗೆ ಪ್ರಗತಿ ಪತ್ರ ಹಾಗೂ ಬಯಸಿದಲ್ಲಿ ವರ್ಗಾವಣೆ ಪತ್ರ ನೀಡಬೇಕು.
ಆರೋಗ್ಯ ಇಲಾಖೆ ಸಹಕಾರ ಪಡೆದು ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಇಲ್ಲವೇ ಗ್ರಾಮ ಪಂಚಾಯಿತಿಯಿಂದ ಶಾಲಾ ಸ್ವಚ್ಛತೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಶಾಲಾ ಆವರಣ, ಕೊಠಡಿಗಳು, ಶೌಚ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು.
ಶಾಲೆ ಆರಂಭದ ದಿನ ಎಲ್ಲ ಮಕ್ಕಳಿಗೆ ಪೂರೈಕೆಯಾಗಿರುವ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಬೇಕು, ಸಹ ಶಿಕ್ಷಕರ ಸಭೆ ನಡೆಸಿ ಶೈಕ್ಷಣಿಕ ವರ್ಷದ ಕ್ರಿಯಾ ಯೋಜನೆ, ಶಾಲಾ ಅಭಿವೃದ್ಧಿ ಯೋಜನೆಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ದಾಖಲಾತಿಗೆ ವಿಶೇಷ ಆಂದೋಲನ:
ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿಗೆ ಮೇ 25ರಿಂದ ವಿಶೇಷ ಆಂದೋಲನ ನಡೆಸಬೇಕಿದೆ. ಮನೆ, ಮನೆಗೆ ಭೇಟಿ ನೀಡಿ ನಿಗದಿತ ವಯೋಮಾನದ ಮಕ್ಕಳು ಹಾಗೂ ಪಾಲಕರ ಮನವೊಲಿಸಿ ಶಾಲೆಗೆ ದಾಖಲಿಸಬೇಕು. ಶಾಲೆ ಬಿಟ್ಟ ಮಕ್ಕಳು ಇದ್ದರೆ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರ ಪಡೆದು ಮರಳಿ ಶಾಲೆಗೆ ದಾಖಲಿಸಿ ಮುಖ್ಯವಾಹಿನಿಗೆ ತರಬೇಕು.
ಸರ್ಕಾರದಿಂದ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳ ಕುರಿತು ಕರಪತ್ರ, ಬ್ಯಾನರ್, ಫ್ಲೆಕ್ಸ್‌ಗಳ ಮೂಲಕ ಜಾಗೃತಿ ಮೂಡಿಸಿ ಸಾರ್ವಜನಿಕರ ಮನವೊಲಿಸಬೇಕು. ದಿನಪತ್ರಿಕೆ, ರೇಡಿಯೋ, ಸಮೂಹ ಮಾಧ್ಯಮದ ಮೂಲಕ ಶಾಲಾ ಆರಂಭದ ಕುರಿತು ಮಾಹಿತಿ ನೀಡಬೇಕು.
ಅಕ್ಷರ ದಾಸೋಹದ ಕೊಠಡಿ, ಪಾತ್ರೆಗಳು, ನೀರಿನ ಟ್ಯಾಂಕ್, ಸಂಪು, ದವನ ಧಾನ್ಯಗಳನ್ನು ಪರಿಶೀಲಿಸಿ ಸ್ವಚ್ಛಗೊಳಿಸಬೇಕು. ಶಾಲಾ ಆರಂಭದ ದಿನ ಮಧ್ಯಾಹ್ನ ಊಟದ ಜತೆಗೆ ಸಿಹಿ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮಳೆಗಾಲದಲ್ಲಿ ಮುನ್ನೆಚ್ಚರಿಕೆ
ಶಾಲಾ ಪ್ರಾರಂಭದ ಸಮಯದಲ್ಲಿಯೇ ಮುಂಗಾರು ಕೂಡ ಆರಂಭವಾಗುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಸೂಚಿಸಿದೆ.
ಮಳೆಯಿಂದಾಗಿ ಉಂಟಾಗಬಹುದಾದ ವಿಪತ್ತಿನ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಈಗಾಗಲೇ ಪೂರ್ವಭಾವಿ ಸಭೆ ನಡೆಸಿ ನಿರ್ದೇಶನ ನೀಡಲಾಗಿದೆ. ಅದರಂತೆ ಶಿಕ್ಷಣ ಇಲಾಖೆಯಿಂದಲೂ ಈಗಾಗಲೇ ತಾಲೂಕು ವಿಪತ್ತು ನಿರ್ವಹಣಾ ತಂಡ ರಚಿಸಲಾಗಿದ್ದು, ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.
ಪ್ರತಿದಿನ ತಾಲೂಕು ಹಂತದಲ್ಲಿ ಬೀಳುವ ಮಳೆ ಪ್ರಮಾಣವನ್ನು ವರದಿ ಮಾಡಬೇಕು. ಶಿಥಿಲಗೊಂಡ ಶಾಲಾ ಕಟ್ಟಡ ಗುರುತಿಸಿ ಮಕ್ಕಳನ್ನು ಅಲ್ಲಿಂದ ದೂರ ಇರಿಸಬೇಕು. ದೊಡ್ಡ ಚರಂಡಿ, ಮೋರಿಗಳು ಇರುವ ಕಡೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವ ಜತೆಗೆ ಅವುಗಳನ್ನು ಕಲ್ಲು ಚಪ್ಪಡಿ, ಸ್ಲಾೃಬ್‌ಗಳನ್ನು ಹಾಕಿ ಮುಚ್ಚಲು ಸಂಬಂಧಪಟ್ಟವರಿಗೆ ಪ್ರಸ್ತಾವನೆ ಸಲ್ಲಿಸಬೇಕು. ವಿದ್ಯಾರ್ಥಿಗಳು ಅತ್ತ ತೆರಳದಂತೆ ನೋಡಿಕೊಳ್ಳಬೇಕು. ಹೆಚ್ಚಿನ ಹಾನಿ ಉಂಟಾದಲ್ಲಿ ತಕ್ಷಣ ತಹಸೀಲ್ದಾರ್, ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ನದಿ ಪಾತ್ರದಲ್ಲಿ ಸಂಚರಿಸುವ ಮಕ್ಕಳು ಇದ್ದರೆ, ಅವರಿಗೆ ಮುನ್ಸೂಚನೆ ನೀಡಬೇಕು. ವಿದ್ಯುತ್ ತಂತಿ ಹಾಯ್ದು ಹೋಗಿದ್ದರೆ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net