ಮೈಸೂರು: ನಗರದ ಕುದುರೆ ಮಾಳದ ಸರ್ಕಾರಿ ಶಾಲೆ ನವೀಕರಣಕ್ಕಾಗಿ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಂಗಸಂಸ್ಥೆಯಾದ ಯಂಗ್ ಇಂಡಿಯನ್ಸ್ ವತಿಯಿಂದ ಅ.22 ಮತ್ತು 23ರಂದು ಗಾಲ್ಫ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಜಿಲ್ಲಾಧ್ಯಕ್ಷ ಅಭಿಜ್ಞ ರಾಜೀವ್ ತಿಳಿಸಿದರು.
ಜಯಚಾಮರಾಜೇಂದ್ರ ಒಡೆಯರ್ ಗಾಲ್ಛ್ ಕ್ಲಬ್ ಮೈದಾನದಲ್ಲಿ ಆಯೋಜಿಸಿರುವ ಪಂದ್ಯಾವಳಿಗೆ ಅ.22ರಂದು ಬೆಳಗ್ಗೆ 9ಕ್ಕೆ ಉದ್ಯಮಿ ಅರ್ಜುನ್‌ರಂಗ ಚಾಲನೆ ನೀಡಲಿದ್ದಾರೆ. ಅ.23ರಂದು ಸಂಜೆ 7ಕ್ಕೆ ಬಹುಮಾನ ವಿತರಣೆ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಯಚಾಮರಾಜೇಂದ್ರ ಒಡೆಯರ್ ಗಾಲ್ಪ್‌ನ 200ಕ್ಕೂ ಹೆಚ್ಚು ಸದಸ್ಯರು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಪ್ರಾಯೋಜಕರಿಂದ ಸಂಗ್ರಹಿಸಿದ ದೇಣಿಗೆಯನ್ನು ಕುದುರೆ ವಾಳ ಸರ್ಕಾರಿ ಶಾಲೆ ದುರಸ್ತಿಗೆ ಬಳಸಲಾಗುವುದು. ನಮ್ಮ ಸಂಸ್ಥೆ ಯುವಜನರಿಂದ ಕೂಡಿದ್ದು, ಸಮುದಾಯ ನೆರವಿಗೆ ನಿಂತಿದೆ. ಆಸಕ್ತರು ಶಾಲೆಯ ಅಭಿವೃದ್ಧಿಗೆ ನೆರವು ನೀಡಬಹುದು. ಮಾಹಿತಿಗೆ ಮೊ: 70199 67945 ಸಂಪರ್ಕಿಸಬಹುದು ಎಂದು ಹೇಳಿದರು.
ಸಂಸ್ಥೆಯ ಅಂಕಿತ್ ಸೋಂತಾಲಿಯಾ, ವರುಣ್ ಗುರುರಾಜ್, ರಾಹುಲ್ ಎಸ್.ಅರಸ್, ಪ್ರತಿಭಾ ಪ್ರಶಾಂತ್‌ರಾವ್ ಇತರರು ಇದ್ದರು.