

ಶಿರಸಿ: ಶಾಲೆ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಈ ಕಾರಣದಿಂದ ಶಿರಸಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಆರು ತಾಲೂಕುಗಳಿಗೆ ಪಠ್ಯಪುಸ್ತಕಗಳನ್ನು ರವಾನಿಸಿದ್ದು, ತರಗತಿವಾರು ವಿದ್ಯಾರ್ಥಿಗಳ ಪೋಷಕರನ್ನು ಶಾಲೆಗೆ ಕರೆದು ಪಠ್ಯಪುಸ್ತಕಗಳನ್ನು ಮಕ್ಕಳಿಗೆ ತಲುಪಿಸಲಾಗುತ್ತಿದೆ.
2020-21ನೇ ಸಾಲಿಗೆ ಅಗತ್ಯವಿರುವ ಬಹುತೇಕ ಪುಸ್ತಕಗಳು ಈಗಾಗಲೇ ಉಪನಿರ್ದೇಶಕರ ಕಚೇರಿ ವ್ಯಾಪ್ತಿಗೆ ತಲುಪಿದ್ದು, ಆಯಾ ಕ್ಷೇತ್ರ ಶಿಕ್ಷಣಧಿಕಾರಿಗಳಿಗೆ ತಲುಪಿಸುವ ಕಾರ್ಯ ಆಗಿದೆ. ಪ್ರಸ್ತುತ ಶಾಲಾ ಶಿಕ್ಷಕರಿಗೆ ಪುಸ್ತಕ ನೀಡಲಾಗಿದ್ದು, ಶಾಲೆಗಳಲ್ಲಿ ಅವುಗಳ ವಿತರಣೆ ಆರಂಭವಾಗಿದೆ. ಈವರೆಗೆ ಶೇ. 88.98ರಷ್ಟು ಪಠ್ಯಪುಸ್ತಕಗಳ ವಿತರಣೆ ಮಾಡಲಾಗಿದೆ.
ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ವಿತರಿಸಲು ಒಟ್ಟು 849808 ಪಠ್ಯಪುಸ್ತಕಗಳು ಬಂದಿವೆ. ಅನುದಾನ ರಹಿತ ಶಾಲೆಗಳಿಗೆ ಒಟ್ಟು 136766 ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ. ಖಾಸಗಿ ಶಾಲೆಗಳಲ್ಲಿ ಆರ್ಟಿಇ ಅಡಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಸರ್ಕಾರವು ಉಚಿತವಾಗಿ ಪುಸ್ತಕಗಳನ್ನು ವಿತರಣೆ ಮಾಡುತ್ತಿದೆ. ಶಾಲೆಗಳಿಗೆ ತಲುಪಿರುವ ಈ ಪಠ್ಯಪುಸ್ತಕಗಳನ್ನು ಪೋಷಕರ ಮೂಲಕ ಮಕ್ಕಳಿಗೆ ತಲುಪಿಸುವ ಕಾರ್ಯ ಆರಂಭವಾಗಿದೆ. ಕೋವಿಡ್ 19 ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪಠ್ಯಪುಸ್ತಕಗಳ ವಿತರಣೆ ನಡೆದಿದೆ.
ವಾಟ್ಸ್ ಆಪ್ ಗ್ರೂಪ್ ಮೂಲಕ ಹೋಂ ವರ್ಕ್: ಸಿದ್ದಾಪುರ ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳ ಶಿಕ್ಷಕರು ಮಕ್ಕಳ ಪಾಲಕರ ವಾಟ್ಸ್ ಆಪ್ ಗ್ರೂಪ್ ರಚಿಸಿ ಮಕ್ಕಳಿಗೆ ನಿತ್ಯ ಹೋಂ ವರ್ಕ್ ನೀಡುತ್ತಿದ್ದು, ಇದರ ಪ್ರಯೋಜನವನ್ನು ಮಕ್ಕಳು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಕೆಲವು ಊರುಗಳಿಗೆ ನೆಟ್ವರ್ಕ್ ಪ್ರಾಬ್ಲಂ ಇರುವುದರಿಂದ ಎಲ್ಲ ಮಕ್ಕಳಿಗೂ ಇದರ ಪ್ರಯೋಜನ ಪಡೆದುಕೊಳ್ಳಲಾಗುತ್ತಿಲ್ಲ. ಕಂಪ್ಯೂಟರ್ ಅಥವಾ ಸ್ಮಾರ್ಟ್ಫೋನ್ ಹೊಂದಿರದ ಮಕ್ಕಳಂತೂ ಆನ್ಲೈನ್ ಶಿಕ್ಷಣದಿಂದ ವಂಚಿತರಾಗುವಂತಾಗಿದೆ.
ಈಗಾಗಲೇ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಗೆ ಪಠ್ಯಪುಸ್ತಕ ವಿತರಣೆ ಆಗಿದೆ. ತ್ವರಿತವಾಗಿ ಶಾಲಾ ಹಂತದಲ್ಲಿ ಇವುಗಳ ವಿತರಣೆ ಆಗಬೇಕು. ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ವಿದ್ಯಾರ್ಥಿಗಳ ಪೋಷಕರನ್ನು ಶಾಲೆಗೆ ಕರೆಸಿಕೊಂಡು ಹಂತಹಂತವಾಗಿ ಪುಸ್ತಕ ವಿತರಿಸಬೇಕು. | ದಿವಾಕರ ಶೆಟ್ಟಿ ಡಿಡಿಪಿಐ ಶಿರಸಿ ಶೈಕ್ಷಣಿಕ ಜಿಲ್ಲೆ