

ಚನ್ನಪಟ್ಟಣ: ರಾಜ್ಯದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದು, ಸರ್ಕಾರ ತಜ್ಞರ ವರದಿಗಾಗಿ ಕಾಯದೆ ವಾಸ್ತವಾಂಶಗಳನ್ನು ಗಮನಿಸಿ ಶಾಲೆ ಕಾಲೇಜುಗಳಿಗೆ 15 ದಿನ ರಜೆ ನೀಡಿ ಸೋಂಕು ತಡೆಯುವ ಕೆಲಸ ಮಾಡಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.
ತಾಲೂಕಿನ ಹೊಂಗನೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕರೊನಾ ಸೋಂಕು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತಿದೆ. ಮಂಡ್ಯ ಪಿಇಎಸ್ ಕಾಲೇಜಿನಲ್ಲಿ 150 ವಿದ್ಯಾರ್ಥಿಗಳು ಹಾಗೂ ತುಮಕೂರಿನ ಶಾಲೆಯೊಂದರಲ್ಲಿ 600 ಮಕ್ಕಳಿಗೆ ಸೋಂಕು ತಗುಲಿದ ಮಾಹಿತಿ ಇದೆ. ಇದರಿಂದ ಪಾಲಕರು ಭಯಗೊಂಡಿದ್ದಾರೆ. ಸರ್ಕಾರ ತಜ್ಞರ ವರದಿ ಎಂದು ಸಬೂಬು ಹೇಳದೆ ಕರೊನಾ ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳನ್ನು, ವಸತಿ ಶಾಲೆಗಳನ್ನು ಮುಚ್ಚಬೇಕು ಎಂದು ಒತ್ತಾಯಿಸಿದರು.
ಶಾಲಾ - ಕಾಲೇಜು ಬಂದ್ ಮಾಡುವ ವಿಚಾರದಲ್ಲಿ ತಜ್ಞರು ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಆದರೆ, ಸರ್ಕಾರಕ್ಕೆ ಜವಾಬ್ದಾರಿ ಇದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆಗಳನ್ನು ಬಂದ್ ಮಾಡುವುದು ಉತ್ತಮ. ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ಮಾಡಲಿ ಎಂದು ಮನವಿ ಮಾಡಿದರು.
ಕೋವಿಡ್ ನಿಯಂತ್ರಣಕ್ಕೆ ಜಾರಿಮಾಡಿರುವ ವೀಕೆಂಡ್ ಕರ್ಫ್ಯೂದಿಂದಾಗಿ ದಿನಗೂಲಿ ನೌಕರರು, ಬೀದಿಬದಿ ವ್ಯಾಪಾರಿಗಳು ಹಾಗೂ ಸಾಮಾನ್ಯ ಜನರ ಜೀವನಕ್ಕೆ ತೊಂದರೆಯಾಗುತ್ತಿದೆ. ದಿನನಿತ್ಯದ ಆದಾಯವನ್ನೇ ನಂಬಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇವರ ಬದುಕು ನಿರ್ವಹಣೆಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದರು.
ಬಿಜೆಪಿ ನಾಯಕರಲ್ಲೇ ಗೊಂದಲ: ವೀಕೆಂಡ್ ಕರ್ಫ್ಯೂ ವಿಚಾರದಲ್ಲಿ ಬಿಜೆಪಿ ನಾಯಕರಲ್ಲೇ ಗೊಂದಲವಿದ್ದು, ಮೊದಲು ಅದನ್ನು ಸರಿಪಡಿಸಿಕೊಳ್ಳಲಿ. ವಿರೋಧಪಕ್ಷಗಳ ಬಗ್ಗೆ ಸುಮ್ಮನೆ ಆರೋಪ ಮಾಡುವುದಲ್ಲ, ನಾವೂ ಸರ್ಕಾರ ನಡೆಸಿದ್ದೇವೆ. ಜನರ ಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿ ಎಂಬುದನ್ನು ಅಧಿಕಾರದಲ್ಲಿರುವವರು ಅರಿತುಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದರು.
ಜನರೇ ಪರಾಮರ್ಶಿಸಲಿ: ನಾನು ಮೂರೂವರೆ ವರ್ಷದಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದೀನಿ, ಬೇರೆಯವರು 20 ವರ್ಷಗಳಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಜನರೇ ಪರಾಮರ್ಶಿಸಲಿ, ಇದು ಕ್ಷೇತ್ರದ ಜನತೆಗೆ ಬಿಟ್ಟ ವಿಚಾರ, ಮಾಡಿದ ಕೆಲಸಗಳನ್ನು ನೆನೆಸಿಕೊಳ್ಳದೇ ಹೋದರೆ ಆಗುವ ಅನಾಹುತಗಳೇನು ಎಂಬುದನ್ನು ಜನರೇ ತೀರ್ಮಾನಿಸ ಬೇಕು ಎಂದು ಮಾರ್ಮಿಕವಾಗಿ ನುಡಿದರು.
ಯೋಗೇಶ್ವರ್‌ಗೆ ಟಾಂಗ್: ಮೊನ್ನೆ ಎಲ್ಲೋ ವಸತಿ ಸಚಿವರ ಜತೆ ಮೀಟಿಂಗ್‌ನಲ್ಲಿ ಕುಳಿತಿರುವ ಫೋಟೋಗಳನ್ನು ಪತ್ರಿಕೆಗಳಲ್ಲಿ ಹಾಕಿಸಿಕೊಂಡು, ಈ ತಾಲೂಕಿಗೆ ವಸತಿ ಯೋಜನೆಗಳು ಮಂಜೂರೇ ಆಗಿಲ್ಲ, ಹೆಚ್ಚುವರಿ ಮನೆ ಮಂಜೂರು ಮಾಡಿ ಎಂದು ಕೇಳಿದ್ದನ್ನು ಗಮನಿಸಿದ್ದೇನೆ. ಅವರು ಈ ಹಿಂದೆ ಹತ್ತಾರು ಸಾವಿರ ಮನೆಗಳನ್ನು ಕೊಡಿಸುತ್ತೇನೆ ಎಂದು ಚಿನ್ನದ ಬಣ್ಣದ ಲಾಂಛನ ಇರುವ ಪತ್ರ ಬರೆದು ಜನರನ್ನು ಮರಳು ಮಾಡಿದ ಕತೆ ಏನಾಯ್ತು ಎಂಬುದನ್ನೂ ನೋಡಿದ್ದೇನೆ ಎಂದು ಮಾಜಿ ಸಚಿವ ಯೋಗೇಶ್ವರ್ ವಿರುದ್ಧ ಎಚ್‌ಡಿಕೆ ವಾಗ್ದಾಳಿ ನಡೆಸಿದರು. ಇನ್ನು ಜೆಡಿಎಸ್ ಮುಖಂಡರನ್ನು ಯೋಗೇಶ್ವರ್ ಸೆಳೆಯುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಚಿಲ್ಲರೆ ರಾಜಕಾರಣ ಬಿಡಬೇಕು: ಹಾರೋಹಳ್ಳಿ ಭಾಗದಲ್ಲಿ ಸ್ಮಶಾನ ಇಲ್ಲ ಎಂದು ಈಡಿಗ ಸಮುದಾಯದ ಜನತೆ ಪ್ರತಿಭಟನೆ ನಡೆಸಿದ ಬಗ್ಗೆ ಪ್ರಸ್ತಾಪಿಸಿದ ಕುಮಾರಸ್ವಾಮಿ, ಆ ಗ್ರಾಮದಲ್ಲಿ ಸ್ಮಶಾನ ಇದೆ. ಒಂದು ಕಿ.ಮೀ. ದೂರ ಇದೆ ಎಂದು ಪ್ರತಿಭಟನೆ ಮಾಡುತ್ತಾರೆ. ಸ್ಮಶಾನವನ್ನು ಮನೆಯ ಮುಂದೆ ಮಾಡಿಕೊಡಲು ಸಾಧ್ಯವೇ. ಈ ವಿಚಾರದಲ್ಲಿ ಜನರನ್ನು ಎತ್ತಿ ಕಟ್ಟುತ್ತಿರುವ ಕಾಂಗ್ರೆಸ್ ನಾಯಕರು ಚಿಲ್ಲರೆ ರಾಜಕಾರಣ ಬಿಡಬೇಕು ಎಂದು ಟೀಕಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಜಯಮುತ್ತು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಮುಖಂಡ ಸಿಂಲಿಂ ನಾಗರಾಜು ಸೇರಿ ಹಲವು ಜೆಡಿಎಸ್ ಮುಖಂಡರು ಇದ್ದರು.