

ಸೊರಬ:ಸಾರ್ವಜನಿಕ ಕೆಲಸ ಕಾರ್ಯಗಳನ್ನು ಸರ್ಕಾರವೇ ಮಾಡಬೇಕು ಎಂದು ಅಪೇಕ್ಷಿಸದೆ ಸ್ವಯಂಪ್ರೇರಿತರಾಗಿ ಕೈಲಾದ ಸೇವೆ ಸಲ್ಲಿಸಲು ಸಾರ್ವಜನಿಕರು ಸಹ ಸಿದ್ಧರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. ತಾಲೂಕಿನ ಹುರುಳಿ ಗ್ರಾಮದಲ್ಲಿ ಸೋಮವಾರ ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗೆ ನೂತನ ಕಾಂಪೌಂಡ್ ಮತ್ತು ಅಡುಗೆ ಕೋಣೆ ಕಾಮಗಾರಿಗೆ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಅವರೊಂದಿಗೆ ಸೇರಿ ಶ್ರಮದಾನ ಮಾಡುವ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಶಾಲಾ ಸ್ವತ್ತು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಈ ಹಿಂದೆ ಶಾಸಕನಾಗಿದ್ದ ಅವಧಿಯಲ್ಲಿ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲಾಗಿತ್ತು. ಪ್ರಸ್ತುತ ಹೆಚ್ಚುವರಿಯಾಗಿ ಎರಡು ಕೊಠಡಿಗಳ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವುದಾಗಿ ಅವರು ಭರವಸೆ ನೀಡಿದರು. ಎಲ್ಲರಲ್ಲೂ ನಮ್ಮ ಊರು, ನಮ್ಮ ಶಾಲೆ ಎಂಬ ಅಭಿಮಾನವಿರಬೇಕು. ಮಕ್ಕಳ ಭವಿಷ್ಯ ರೂಪಿಸುವುದು ಮಾತ್ರವಲ್ಲ, ಶ್ರಮದಾನದ ಮೂಲಕ ಸರ್ಕಾರದ ಆಸ್ತಿಯ ರಕ್ಷಣೆ ಹಾಗೂ ಅಭಿವೃದ್ಧಿ ಹೊಣೆ ನಮ್ಮೆಲ್ಲರದು. ರಾಜ್ಯದಲ್ಲಿ ಅತಿಹೆಚ್ಚು 1300 ಕೆರೆಗಳನ್ನು ಹೊಂದಿರುವ ಸೊರಬ ತಾಲೂಕಿನ ಕೆರೆಗಳ ಅಭಿವೃದ್ಧಿಗೆ ನರೇಗಾ ಯೋಜನೆ ಸಂಜೀವಿನಿಯಾಗಿದೆ. ಈ ಹಿಂದೆಯೂ ಶಾಸಕನಾಗಿದ್ದಾಗ ಮಾವಲಿ ಕೆರೆಯ ಹೂಳೆತ್ತುವಾಗಲೂ ಶ್ರಮದಾನ ಮಾಡಿದ್ದೆ ಎಂದರು. ಅಜೀಮ್ ಪ್ರೇಮ್‌ಜೀ ಫೌಂಡೇಶನ್ ಆರ್ಥಿಕ ನೆರವಿನೊಂದಿಗೆ ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ವಾರದ ಆರು ದಿನವೂ ಮೊಟ್ಟೆ, ಹಾಲು, ರಾಗಿಮಾಲ್ಟ್ ನೀಡಲಾಗುತ್ತಿದೆ. ಬಟ್ಟೆ, ಶೂ, ಸಾಕ್ಸ್ ಮತ್ತಿತರ ಸೌಲಭ್ಯಗಳೊಂದಿಗೆ ಶಾಲೆಗೆ ಉಚಿತ ವಿದ್ಯುತ್ ಮತ್ತು ನೀರು ಒದಗಿಸಲಾಗುತ್ತಿದೆ. ಹಾಗಾಗಿ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಶಿಕ್ಷಣ ಸಚಿವ ಮಧು ಬಂಗಾರಪ್ಪ, ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಸ್ವತಃ ಗುದ್ದಲಿ, ಪಿಕಾಸಿ ಹಿಡಿದು, ಗುಂಡಿ ತೆಗೆದು, ಮಣ್ಣಿನ ಬುಟ್ಟಿ ಹೊತ್ತು ಶ್ರಮದಾನ ಮಾಡಿ ಎಲ್ಲರಿಗೂ ಪ್ರೇರಣೆಯಾದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಮುಖಂಡರಾದ ಶ್ರೀನಿವಾಸ್ ಕರಿಯಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ.ರುದ್ರಗೌಡ, ಶಿಮುಲ್ ನಿರ್ದೇಶಕ ದಯಾನಂದ ಗೌಡ, ಮಹಿಳಾ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ, ಗ್ರಾಪಂ ಅಧ್ಯಕ್ಷೆ ಅನಸೂಯಾ ಶಿವಕುಮಾರ್, ತಹಸೀಲ್ದಾರ್ ಮಂಜುಳಾ ಹೆಗಡಾಳ್, ಇಒ ಡಾ. ಪ್ರದೀಪ್‌ಕುಮಾರ, ತಾಪಂ ಕಚೇರಿ ಸಹಾಯಕ ನಿರ್ದೇಶಕ ಶ್ರೀರಾಮ್, ಜಿಲ್ಲಾ ಯೋಜನೆ ಮತ್ತು ಸಾಂಖ್ಯಿಕ ಅಧಿಕಾರಿ ನಂದಿನಿ, ಡಿಡಿಪಿಐ ಮಂಜುನಾಥ, ಜಿಪಂ ಮಾಜಿ ಸದಸ್ಯರಾದ ಶಿವಲಿಂಗೇಗೌಡ, ವೀರೇಶ್ ಕೊಟಗಿ, ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಗೌಡ, ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ, ಎಂ.ಡಿ.ಶೇಖರ್ ಇತರರಿದ್ದರು.
ಶ್ರಮಿಕ ವರ್ಗಕ್ಕೆ ಬಲ ತುಂಬುವ ಯೋಜನೆ ನರೇಗಾ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ದೂರದೃಷ್ಟಿಯ ಯೋಜನೆ ಅತ್ಯದ್ಭುತವಾದುದು. ಹಲವು ದಶಕಗಳ ನಂತರವೂ ಪ್ರಚಲಿತದಲ್ಲಿರುವುದು ಯೋಜನೆಯ ಮಹತ್ವವನ್ನು ಸಾರಿ ಹೇಳುತ್ತದೆ. ಬಲ್ಕಿಷ್ ಬಾನು, ವಿಧಾನ ಪರಿಷತ್ ಸದಸ್ಯೆ