ಶಾಲೆ ಆರಂಭಿಸಲು ಒತ್ತಾಯ

Basavaraj Bharshetty
Published on

ಬೀದರ್: ಪ್ರಾಥಮಿಕ ಶಾಲೆಗಳನ್ನು ಶೀಘ್ರ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘದಿಂದ ಜ. 5ರಂದು ಇಲ್ಲಿ ಡಿಡಿಪಿಐ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಭರಶೆಟ್ಟಿ ತಿಳಿಸಿದ್ದಾರೆ.

ಇಲ್ಲಿ ಸೋಮವಾರ ಜರುಗಿದ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಬೇಡಿಕೆಗಳ ಕುರಿತು ಸರ್ಕಾರ ಮೇಲೆ ಒತ್ತಡ ತರಲು ಜನವರಿಯಲ್ಲಿ ಆಯಾ ಶಾಸಕರ ಮನೆ ಎದುರು ಧರಣಿಯೂ ಹೂಡುವುದಾಗಿ ಹೇಳಿದರು. ಶಾಲೆಗಳಿಲ್ಲದ ಕಾರಣ ಮಕ್ಕಳ ಮೇಲೆ ನಾನಾ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹಲವರು ಬಾಲ ಕಾರ್ಮಿಕರಾಗುತ್ತಿರುವ ವರದಿ ಸಹ ಬರುತ್ತಿವೆ. ಹೀಗಾಗಿ ಕರೊನಾ ನಿಯಮ ಪಾಲನೆಯೊಂದಿಗೆ 1-8 ತರಗತಿಗಳನ್ನು ಕೂಡಲೇ ಆರಂಭಿಸಬೇಕು. ಶಾಲೆಗಳನ್ನು ಆರಂಭಿಸುವ ವಿಚಾರದಲ್ಲಿ ನಿರ್ದಿಷ್ಟ ನಿಲುವು ತಳೆಯದೆ, ಪಾಲಕರು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಗೊಂದಲವುಂಟು ಮಾಡುತ್ತಿರುವ ಶಿಕ್ಷಣ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ಮೇ ಅಂತ್ಯದೊಳಗೆ ಜಿಲ್ಲೆಯ 137 ಖಾಸಗಿ ಶಾಲೆ ಮುಚ್ಚಲಾಗುವುದು ಎಂದು ಶಿಕ್ಷಣ ಸಚಿವರು ನೀಡಿದ ಹೇಳಿಕೆ ಖಂಡನೀಯ. ಈ ರೀತಿ ಮಾಡಿದರೆ ಜಿಲ್ಲೆ ಎಲ್ಲ ಖಾಸಗಿ ಅನುದಾನ ರಹಿತ ಶಾಲೆಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಪ್ರಮುಖರಾದ ಮುಕ್ರಂ ಪಟೇಲ್, ಬಸವರಾಜ ಶೆಟಕಾರ, ಸುರೇಶ ಪಾಟೀಲ್, ಅನೂಪ್ ಪಾಠಕ್, ಸುರೇಶ ಕುಂಬಾರ, ರಾಜು ಮಣಗೇರೆ, ಸಲೀಮ್ ಪಾಶಾ, ಸಂದೀಪ ಶೆಟಕಾರ, ಕಾಮಶೆಟ್ಟಿ ಚಿಕ್ಕಬಸೆ, ಚಂದ್ರಕಾಂತ ಪಾಟೀಲ್, ಬಾಬು ಗೊಂಡ, ವೀರೇಶ ಯದಲಾಪುರ, ವಿಷ್ಣು ಬೋಲಸೂರೆ, ಸಂಜೀವಕುಮಾರ ಶೆಟಕಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net