

ಚಿಕ್ಕಬಳ್ಳಾಪುರ : ಕರೊನಾ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆ ಆರಂಭಕ್ಕೆ ಜಿಲ್ಲೆಯ ಬಹುತೇಕ ಪಾಲಕರು ವಿರೋಧ ವ್ಯಕ್ತಪಡಿಸಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ವರದಿಯಾಗಿದೆ.
ಶಾಲೆ ಪ್ರಾರಂಭಿಸುವ ಕುರಿತು ಇಲಾಖೆಯು ಶಿಕ್ಷಕರ ಮೂಲಕ ಜೂ.5 ರಿಂದ ಜೂ.20 ರವರೆಗೆ ಪಾಲಕರಿಂದ ಅಭಿಪ್ರಾಯ ಸಂಗ್ರಹದ ಸಮೀಕ್ಷೆ ನಡೆಸಿತ್ತು. ಶೇ.95 ಮಂದಿ ಆತಂಕದ ನಡುವೆ ಶಾಲೆ ಪ್ರಾರಂಭ ಬೇಡ ಎಂಬ ಸಲಹೆ ನೀಡಿದ್ದರೆ, ಉಳಿದ ಶೇ.5 ಮಂದಿ ಸರ್ಕಾರವೇ ಒಳ್ಳೆಯ ನಿರ್ಧಾರ ಕೈಗೊಳ್ಳಲಿ ಎಂದು ಜಾರಿಕೊಂಡಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಹಿರಿಯ ಮತ್ತು ಪ್ರಾಥಮಿಕ ಶಾಲೆ, ಆಗಸ್ಟ್‌ನಲ್ಲಿ ಪ್ರೌಢಶಾಲೆ ಪ್ರಾರಂಭಿಸುವ ಹಾಗೂ ವಿವಿಧ ಪಾಳಿಯಲ್ಲಿ ತರಗತಿಗಳ ನಿರ್ವಹಣೆ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಸೂಕ್ತ ತೀರ್ಮಾನ ಕೈಗೊಳ್ಳಲು ಸಲಹೆ ವ್ಯಕ್ತವಾಗಿದೆ.ನಗರ, ಪಟ್ಟಣ ಪ್ರದೇಶಗಳ ಬಹುತೇಕರು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳನ್ನು ನಡೆಸದೆ ಉತ್ತೀರ್ಣಗೊಳಿಸುವ, ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ತಿರುವು ನೀಡುವ ಹತ್ತನೇ ತರಗತಿ ಸೇರಿ ಇತರ ಪಬ್ಲಿಕ್ ಪರೀಕ್ಷೆಗಳನ್ನು ಮಾತ್ರ ಸೂಕ್ತ ತರಬೇತಿಯೊಂದಿಗೆ ನಡೆಸುವುದು ಒಳಿತು ಎಂದಿದ್ದಾರೆ.ಬೋಧನಾ ವಿಷಯ ಕಡಿಮೆ ಮತ್ತು ಸರಳೀಕರಣ, ಮನೆ ಪಾಠದ ತಂತ್ರದೊಂದಿಗೆ ಶಿಕ್ಷಣ ನೀಡಿದರೆ ಸಾಕು ಎಂಬ ಆಗ್ರಹಪೂರ್ವಕ ಮನವಿಯೂ ಕೇಳಿಬಂದಿದೆ.
ನಗರಗಳಲ್ಲಿಯೇ ಆತಂಕ : ಗ್ರಾಮೀಣ ಭಾಗಕ್ಕಿಂತ ನಗರ, ಪಟ್ಟಣ ಪ್ರದೇಶಗಳ ಪಾಲಕರಲ್ಲಿ ಆತಂಕ ಮನೆಮಾಡಿರುವುದು ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಪತ್ತೆಯಾಗುತ್ತಿರುವ ಪ್ರಕರಣಗಳು ಬೆಚ್ಚಿ ಬೀಳಿಸುತ್ತಿದ್ದು, ಕರೊನಾ ವಕ್ಕರಿಸಿದರೆ ಗತಿ ಏನು ಎಂಬ ಭಯದಲ್ಲಿ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದರ ಬಗ್ಗೆ ಯೋಚಿಸುತ್ತಿಲ್ಲ. ನಮ್ಮಮಗು ಮನೆಯಲ್ಲಿರಲಿ ಎನ್ನುತ್ತಿದ್ದಾರೆ.
ಹಳ್ಳಿಗಳಲ್ಲಿ ಅಪಸ್ಪರ ಕಡಿಮೆ! : ಗ್ರಾಮೀಣ ಭಾಗದಲ್ಲಿ ಕರೊನಾ ಸೋಂಕು ಹರಡುತ್ತಿರುವುದರ ಬಗ್ಗೆ ಅರಿವಿದ್ದರೂ ಹಳ್ಳಿಯ ಜನರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ, ಗ್ರಾಮೀಣ ಜನಜೀವನ, ಕೆಲಸ ಕಾರ್ಯಗಳು ಸಾಮಾನ್ಯ ರೀತಿಯಲ್ಲಿವೆ. ಇದರಿಂದ ಶಾಲೆಯ ಪ್ರಾರಂಭದ ಬಗ್ಗೆ ಅಷ್ಟಾಗಿ ಅಪಸ್ವರ ವ್ಯಕ್ತವಾಗುತ್ತಿಲ್ಲ. ಆದರೆ, ಏನೂ ತೊಂದರೆಯಾಗುವುದಿಲ್ಲ ಎಂಬ ಖಾತ್ರಿ ನೀಡಿ, ಹೊಣೆ ಹೊತ್ತರೆ ನಮ್ಮದೇನು ತಕರಾರು ಇಲ್ಲ ಎನ್ನುತ್ತಿದ್ದಾರೆ.
ಸಮೀಕ್ಷೆ ವರದಿ ಸಲ್ಲಿಕೆ : ಈಗಾಗಲೇ ಸಮೀಕ್ಷೆ ಪೂರ್ಣಗೊಂಡಿದೆ, ವಿವಿಧ ಶಾಲೆಗಳ ಮಾಹಿತಿ ಕ್ರೋಡೀಕರಿಸಲಾಗುತ್ತಿದ್ದು, ಕೇಂದ್ರ ಕಚೇರಿಗೆ ಸಲ್ಲಿಸಲು ಜೂ.30ರವರೆಗೆ ಅವಕಾಶ ಇದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಜಿಲ್ಲೆಯಲ್ಲಿ 946 ಕಿರಿಯ ಮತ್ತು 531 ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಗಳು, 1 ಕಿರಿಯ ಮತ್ತು 50 ಹಿರಿಯ ಅನುದಾನಿತ ಶಾಲೆಗಳು, 52 ಕಿರಿಯ ಮತ್ತು 190 ಖಾಸಗಿ ಶಾಲೆಗಳು, ವಿವಿಧ ಇಲಾಖೆಯ 27 ಸೇರಿ ಒಟ್ಟು 1797 ಪ್ರಾಥಮಿಕ ಶಾಲೆಗಳಿವೆ. 111 ಸರ್ಕಾರಿ ಮತ್ತು 45 ಅನುದಾನಿತ ಪ್ರೌಢಶಾಲೆಗಳು, 116 ಖಾಸಗಿ ಮತ್ತು ವಿವಿಧ ಇಲಾಖೆಯ 15 ಸೇರಿ ಒಟ್ಟು 287 ಪ್ರೌಢ ಶಾಲೆಗಳಿವೆ. ಸರ್ಕಾರಿ ಶಾಲೆಗಳು ವಿಳಂಬದ ನಿರೀಕ್ಷೆಯಲ್ಲಿದ್ದರೆ, ಖಾಸಗಿ ಶಾಲೆಗಳು ತ್ವರಿತ ಆರಂಭಕ್ಕೆ ಹಾತೊರೆಯುತ್ತಿವೆ ಎನ್ನುವುದು ವಿಶ್ಲೇಷಕರ ಮಾತು.