ಶಾಲೆ ಆರಂಭಕ್ಕೂ ಮುನ್ನ ಸೌಲಭ್ಯ ನೀಡಿ

4 sgr 1
Published on

ಸಾಗರ: ಶಾಲೆಗಳನ್ನು ಆರಂಭಿಸುವ ಮೊದಲು ಸಾರಿಗೆ ವ್ಯವಸ್ಥೆ, ಶಾಲಾ ಸ್ವಚ್ಛತೆ ಹಾಗೂ ಶಿಕ್ಷಕರಿಗೆ ಆರೋಗ್ಯ ತಪಾಸಣೆ ನಡೆಸುವಂತೆ ಒತ್ತಾಯಿಸಿ ಗುರುವಾರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ವಿ.ಟಿ.ಸ್ವಾಮಿ ಮಾತನಾಡಿ, ಸರ್ಕಾರ ಜೂ.5ರಿಂದ ಶಾಲೆ ಪುನರಾರಂಭ ಹಿನ್ನೆಲೆಯಲ್ಲಿ ಶಿಕ್ಷಕರು ಹಾಜರಾಗುವಂತೆ ಸೂಚಿಸಿದೆ. ಆದರೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲ. ಗ್ರಾಮಾಂತರ ಪ್ರದೇಶಗಳ ಶಿಕ್ಷಕರು ನಿಗದಿತ ಸಮಯಕ್ಕೆ ಶಾಲೆ ತಲುಪಲು ಅಸಾಧ್ಯ ಎಂದರು.

ಕರೊನಾ ಸೋಂಕು ಹಿನ್ನೆಲೆಯಲ್ಲಿ ಗ್ರಾಪಂನಿಂದ ಇದುವರೆಗೂ ಶಾಲೆಗಳಿಗೆ ಸ್ಯಾನಿಟೈಸರ್ ಮಾಡಿಸಿಲ್ಲ. ಮಕ್ಕಳು ಶಾಲೆಗೆ ಬಂದಾಗ, ಟಿ.ಸಿ. ತೆಗೆದುಕೊಂಡು ಹೋಗಲು ಬರುವ ಮಕ್ಕಳು, ಪಾಲಕರ ತಪಾಸಣೆಗೆ ಒಳಪಡಿಸಲು ಅಗತ್ಯವಿರುವ ಸ್ಕ್ರೀನಿಂಗ್ ಸಾಮಗ್ರಿ ಸಹ ವಿತರಿಸಿಲ್ಲ. ಕರೊನಾ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಆರೋಗ್ಯ ತಪಾಸಣೆ ಅಗತ್ಯವಿದೆ. ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಾಲತೇಶ್ ಮಾತನಾಡಿ, ಸರ್ಕಾರ ಶಿಕ್ಷಕರಿಗೆ ತಕ್ಷಣ ಆರೋಗ್ಯ ತಪಾಸಣೆಗೆ ಕ್ರಮ ಕೈ ಗೊಳ್ಳಬೇಕು. ಗ್ರಾಮೀಣ ಭಾಗದ ಶಾಲೆಗಳಿಗೆ ಹೋಗುವ ಮಹಿಳಾ ಶಿಕ್ಷಕರಿಗೆ ಸಾರಿಗೆ ವ್ಯವಸ್ಥೆ ಇಲ್ಲದಿದ್ದರೆ ಹೋಗಲು ಸಾಧ್ಯವಿಲ್ಲ. ಸರ್ಕಾರ ಶಾಲೆ ಪುನರಾರಂಭಕ್ಕೂ ಮುನ್ನ ಸೂಕ್ತ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು. ಸಂಘದ ಪ್ರಮುಖರಾದ ಉದಯಕುಮಾರ್ ಕುಂಸಿ, ರಮೇಶ್, ನಾರಾಯಣ್, ಅನಿಲಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net