ಶಾಲೆ ಆರಂಭ ಕುರಿತ ವರದಿ ನ.9ಕ್ಕೆ ಸಿದ್ಧ

banner
Published on

ಬೆಂಗಳೂರು: ಶಾಲೆ ಆರಂಭ ಕುರಿತು ಶಿಕ್ಷಣ ಇಲಾಖೆ ಸರಣಿ ಸಭೆಗಳನ್ನು ನಡೆಸಿದ್ದು, ಇವರಿಂದ ಸಂಗ್ರಹಿಸಿರುವ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ವರದಿ ತಯಾರಿಸಿ ಸೋಮವಾರ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಿದೆ. ಕರೊನಾ ಸೋಂಕರು ರಾಜ್ಯದಲ್ಲಿ ತಗ್ಗಿದ್ದು, ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಶಾಲೆ ಆರಂಭ ಅನಿವಾರ್ಯವೆಂದು ಶಿಕ್ಷಣ ತಜ್ಞರು ಅಭಿಪ್ರಾಯ ತಿಳಿಸಿದ್ದಾರೆ. ಅಲ್ಲದೆ, ಮೂರು ರಾಜ್ಯಗಳಲ್ಲಿ ಈಗಾಗಲೇ ಶಾಲೆ ಆರಂಭವಾಗಿದೆ. ರಾಜ್ಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ನ.17ರಿಂದ ಆರಂಭಿಸುವುದಾಗಿ ಈಗಾಗಲೇ ಉನ್ನತ ಶಿಕ್ಷಣ ಸಚಿವರು ಘೋಷಣೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಕಳೆದ ಒಂದು ವಾರದಿಂದ ಸರಣಿ ಸಭೆಗಳನ್ನು ಆರಂಭಿಸಿದೆ. ಇಲಾಖೆ ಆಯುಕ್ತ ಅನ್ಬುಕುಮಾರ್ ಅವರು ಎಸ್‌ಡಿಎಂಸಿ ಸದಸ್ಯರು, ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆರೋಗ್ಯ, ಸಮಾಜ ಕಲ್ಯಾಣ ಇಲಾಖೆ, ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಈ ರೀತಿ ಎಲ್ಲರ ಜತೆಗೆ ಸಭೆ ನಡೆಸಿದರು.
ಇದರ ಜತೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಸಹ ಸಭೆ ನಡೆಸಿ ನಾಲ್ಕೈದು ದಿನಗಳಲ್ಲಿ ಅಭಿಪ್ರಾಯ ಸಂಗ್ರಹಿಸಿ ಮುಖ್ಯಮಂತ್ರಿಗೆ ಸಲ್ಲಿಸುವುದಾಗಿ ತಿಳಿಸಿದ್ದರು.

ಶನಿವಾರ ಶಿಕ್ಷಣ ಇಲಾಖೆ ಆಯುಕ್ತರು ತಮ್ಮ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರತರಾಗಿದ್ದರಿಂದ ಅಭಿಪ್ರಾಯ ಸಂಗ್ರಹಿಸಿರುವ ಪರಿಶೀಲಿಸಿ ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರ ವರದಿ ಅಂತಿಮಗೊಳಿಸಿ ಶಿಷ್ಠಾಚಾರದ ಪ್ರಕಾರ ಆಯುಕ್ತರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಲಿದ್ದಾರೆ. ಆನಂತರ ಸಚಿವರು, ಮುಖ್ಯಮಂತ್ರಿಗೆ ವರದಿ ಸಲ್ಲಿಕೆಯಾಗಲಿದ್ದು, ಮುಖ್ಯಮಂತ್ರಿಗಳು ಪರಿಶೀಲಿಸಿ ಆನಂತರ ಸಚಿವರೊಂದಿಗೆ ಸಭೆ ನಡೆಸಿ ಶಾಲೆ ಆರಂಭದ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net