

ತ್ಯಾಮಗೊಂಡ್ಲು: ಹೋಬಳಿಯ ಕಳಲುಘಟ್ಟ ಗ್ರಾಪಂ ವ್ಯಾಪ್ತಿಯ ಸುಬ್ರಹ್ಮಣ್ಯ ನಗರದ ಸರ್ಕಾರಿ ಶಾಲೆ ಆಟದ ಮೈದಾನಕ್ಕೆಂದು ಮೀಸಲಿಟ್ಟಿದ್ದ 60/230 ಚದರಡಿ ಜಾಗ ವಶಕ್ಕೆ ಪಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಶುಕ್ರವಾರ ಮುಂದಾದಾಗ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಜಾಗವನ್ನು ನಾವು ಖರೀದಿಸಿದ್ದು, ನಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿರುವುದಾಗಿ ಖಾಸಗಿ ವ್ಯಕ್ತಿಗಳು ಹೇಳಿದರು. ಇದು ಬಿಇಒ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿಗೆ ದಾರಿಯಾಗಿ, ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ನೆಲೆಸಿದೆ.
ಗ್ರಾಪಂ ಸಭೆಯಲ್ಲಿ ಗೊತ್ತುವಳಿ: ಸುಬ್ರಹ್ಮಣ್ಯನಗರ ಶಾಲೆಯ ಆಟದ ಮೈದಾನಕ್ಕೆ ಜಾಗ ಬಿಟ್ಟುಕೊಡಲು 2003-04ರಲ್ಲಿ ನಡೆದಿದ್ದ ಗ್ರಾಪಂ ಸಭೆಯಲ್ಲಿ ಗೊತ್ತುವಳಿ ಮಂಡಿಸಿ, 256ನೇ ನಂಬರ್ ಆಗಿ ಖಾತೆ ಮಾಡಿಕೊಡಲು ಅನುಮೋದನೆ ಪಡೆದುಕೊಳ್ಳಲಾಗಿತ್ತು. ಆದರೆ, ಈ ಜಾಗವನ್ನು ಸ್ವಾಧೀನಕ್ಕೆ ಪಡೆದುಕೊಳ್ಳಲು ಶಾಲೆಯವರು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು. ಇದರಿಂದಾಗಿ ಖಾಸಗಿ ಅವರು ಈ ಜಾಗ ಕಬಳಿಸಿದ್ದಾರೆ ಎನ್ನಲಾಗಿದೆ. ಈ ವಿಷಯ ಗಮನಕ್ಕೆ ಬರುತ್ತಲೇ ಅದನ್ನು ಸ್ವಾಧೀನಪಡಿಸಿಕೊಳ್ಳಲು ಬಿಇಒ ರಮೇಶ್ ಮುಂದಾಗಿದ್ದರು.
ದಾಖಲೆ ಇದ್ದರೆ ಮೇಲಧಿಕಾರಿಗಳ ಗಮನಕ್ಕೆ ತನ್ನಿ: ಸ್ಥಳಕ್ಕೆ ಬಂದ ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಗುರುಪ್ರಕಾಶ್, ಸರ್ಕಾರಿ ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸುವುದು ಅಕ್ಷಮ್ಯ. ನಿಮ್ಮಲ್ಲಿ ದಾಖಲೆಗಳಿದ್ದರೆ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳಿಗೆ ಸಲ್ಲಿಸಿ. ಅವರು ಗೊಂದಲ ನಿವಾರಿಸುತ್ತಾರೆ ಎಂದು ಖಾಸಗಿ ವ್ಯಕ್ತಿಗಳನ್ನು ಸಮಾಧಾನಿಸಿದರು.
ಪಿಡಿಒಗೆ ಮನವಿ: ಈ ಜಾಗದಲ್ಲಿ ನಿವೇಶನ ಖರೀದಿಸಿ, ಇ-ಖಾತೆ ಮಾಡಿಸಿಕೊಂಡಿದ್ದೇವೆ. ಸ್ವತ್ತನ್ನು ಸ್ವಾಧೀನಾನುಭವಕ್ಕೆ ಪಡೆದುಕೊಂಡಿದ್ದೇವೆ. ದಾಖಲೆಗಳನ್ನು ಪರಿಶೀಲಿಸಿ, ನ್ಯಾಯ ಒದಗಿಸುವಂತೆ ಜಾಗದ ಖಾತೆ ಹೊಂದಿರುವ ರಮೇಶ್ ಎಂಬುವವರು ಪಿಡಿಒ ಸಿ.ಗೀತಾಮಣಿ ಅವರಿಗೆ ಮನವಿ ಮಾಡಿದರು.
250 ಸ್ವತ್ತುಗಳನ್ನು ಸ್ವಾಧೀನಕ್ಕೆ ಪಡೆದಿದ್ದೇನೆ: ಬಿಇಒ ಆಗಿ ತಾಲೂಕಿಗೆ ಬಂದ ನಂತರದಲ್ಲಿ ಸರ್ಕಾರಿ ಶಾಲೆಗಳ 270 ಸ್ವತ್ತುಗಳ ಪೈಕಿ 250 ಸ್ವತ್ತುಗಳನ್ನು ಸ್ವಾಧೀನಕ್ಕೆ ಪಡೆದು, ಖಾತೆ ಮಾಡಿಸಿದ್ದೇನೆ. ಸುಬ್ರಹ್ಮಣ್ಯನಗರದ ಸ್ವತ್ತಿನ ಬಗ್ಗೆ ಮಾಹಿತಿ ಸಿಗುತ್ತಲೇ ಅದನ್ನು ವಶಕ್ಕೆ ಪಡೆಯಲು ಮುಂದಾಗಿದ್ದೇನೆ. ಅಧಿಕಾರಿಗಳು ಸರ್ಕಾರಿ ಸ್ವತ್ತುಗಳನ್ನು ಕಾಲಕಾಲಕ್ಕೆ ರಕ್ಷಿಸಿದ್ದಾರೆ. ಇದರಲ್ಲಿ ಯಾವುದೇ ಗೋಲ್‌ಮಾಲ್ ಇಲ್ಲ ಎಂದು ರಮೇಶ್ ಸ್ಪಷ್ಟಪಡಿಸಿದರು.
ಗ್ರಾಮ ಪಂಚಾಯಿತಿಯ ಅಂದಿನ ಗೊತ್ತುವಳಿ ಪ್ರಕಾರ ಈ ಸ್ವತ್ತು ಸರ್ಕಾರಿ ಶಾಲೆಗೆ ಮೀಸಲಿದೆ ಎಂಬುದು ಸ್ಪಷ್ಟವಾಗಿದೆ. ದಾಖಲೆಗಳ ಪ್ರಕಾರವೇ ಕ್ರಮ ಕೈಗೊಳ್ಳುತ್ತೇನೆ. ಇಂದಿನ ವಿದ್ಯಮಾನದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ. ಸಿ. ಗೀತಾಮಣಿ, ಪಿಡಿಒ