

ಶಿಡ್ಲಘಟ್ಟ: ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಾರುಕಟ್ಟೆ ಮಂಡಳಿ (ಕೆಎಸ್‌ಎಂಬಿ) ರೇಷ್ಮೆ ನೂಲು ಖರೀದಿಸುತ್ತಿದ್ದು, ಬರುವ ದಿನಗಳಲ್ಲಿ ಶಾಲಾ ಸಮವಸ್ತ್ರ, ಗಗನ ಸಖಿಯರಿಗೆ ಸೀರೆ ಮತ್ತು ಉಡುಗೆ ತಯಾರಿಸುವ ಮೂಲಕ ರೇಷ್ಮೆ ಉತ್ಪನ್ನ ಬಳಸಿಕೊಳ್ಳುವ ಉದ್ದೇಶವಿದೆ ಎಂದು ರೇಷ್ಮೆ ಖಾತೆ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ.
ರೇಷ್ಮೆಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮುಂಬೈನ ವಿಮಾನ ನಿಲ್ದಾಣದಲ್ಲಿ ನನ್ನದೇ ಆದ ಮಳಿಗೆಗಳಿದ್ದು, ಅವುಗಳನ್ನು ರೇಷ್ಮೆ ಉತ್ಪನ್ನಗಳ ಮಾರಾಟಕ್ಕೆ ಬಳಸಿಕೊಳ್ಳಬಹುದು ಎಂದರು.
ರಾಮನಗರದ ನಂತರ ಶಿಡ್ಲಘಟ್ಟದ ರೇಷ್ಮೆಗೂಡು ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸುವ ಯೋಜನೆಯಿದೆ, ಚೀನಾ ರೇಷ್ಮೆ ಆಮದು ಮಾಡಿಕೊಳ್ಳದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಬೆಳೆಗಾರರ ಬೇಡಿಕೆ ಈಡೇರಿಸುವ ಸಂಬಂಧ ಸಿಎಂ ಜತೆ ಚರ್ಚಿಸುವುದಾಗಿ ಸಚಿವರು ತಿಳಿಸಿದರು.
ವಿಲೀನ ಬೇಡ: ಇಲಾಖೆಯನ್ನು ಬೇರೆ ಇಲಾಖೆಯೊಂದಿಗೆ ವಿಲೀನಗೊಳಿಸುವುದನ್ನು ಕೈಬಿಟ್ಟು, ಸಂಶೋಧನೆಗೆ ಒತ್ತು ನೀಡುವಂತೆ ಹಾಗೂ ಇಲಾಖೆಯಲ್ಲಿರುವ ಖಾಲಿ ಹುದ್ದೆ ಭರ್ತಿ ಮಾಡಿ, ಬೆಳೆಗಾರರ ಹಾಗೂ ನೂಲು ಬಿಚ್ಚಾಣಿಕೆದಾರರ ಬದುಕು ಹಸನಾಗಿಸಲು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಸಂಚಾಲಕ ಮಳ್ಳೂರು ಶಿವಣ್ಣ ಗಮನ ಸೆಳೆದರು.
ಮಾರ್ಚ್‌ನಿಂದ ಗೂಡಿನ ಬೆಲೆ ಪಾತಾಳಕ್ಕೆ ಕುಸಿದ ಪರಿಣಾಮ ರಾಜ್ಯ ಹಾಗೂ ಇತರ ರಾಜ್ಯಗಳಲ್ಲಿ ನೇಕಾರಿಕೆ ಸ್ಥಗಿತವಾಗಿರುವುದರಿಂದ ನೂಲು ಮಾರಾಟವಾಗುತ್ತಿಲ್ಲ. ಕೃಷಿ ತಜ್ಞ ಡಾ.ಸ್ವಾಮಿನಾಥನ್ ವರದಿಯಂತೆ ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕು. ಜತೆಗೆ ರೇಷ್ಮೆಗೂಡು ಬೆಳೆದು ನಷ್ಟ ಹೊಂದಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಕೋರಿದರು.
ಮಾಗಡಿ ಶಾಸಕ ಎ.ಮಂಜು, ರೈತ ಮುಖಂಡರಾದ ಯಲುವಳ್ಳಿ ಸೊಣ್ಣೇಗೌಡ, ಭಕ್ತರಹಳ್ಳಿ ಬೈರೇಗೌಡ, ಹಿತ್ತಲಹಳ್ಳಿ ಸುರೇಶ್, ಎಚ್.ಜಿ.ಗೋಪಾಲಗೌಡ, ಮಳ್ಳೂರು ಹರೀಶ್, ಮುನಿಕೆಂಪಣ್ಣ, ಭಕ್ತರಹಳ್ಳಿ ಪ್ರತೀಶ್, ರೇಷ್ಮೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಠಾರಿಯ, ರೇಷ್ಮೆ ಇಲಾಖೆ ಆಯುಕ್ತೆ ಶೈಲಜಾ, ರೈತ ಸಂಘದ ಪ್ರತಿನಿಧಿಗಳು ಇದ್ದರು.
ರೇಷ್ಮೆಗೆ ಬಜೆಟ್‌ನಲ್ಲಿ ಹಣ: ಕರೊನಾ ಸಂದರ್ಭದಲ್ಲಿ ಹೂ, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ನಷ್ಟವಾದ ಹಿನ್ನೆಲೆಯಲ್ಲಿ ಪರಿಹಾರ ನೀಡಲಾಗಿದೆ. ಲಾಕ್‌ಡೌನ್ ವೇಳೆಯೂ ರೇಷ್ಮೆ ಮಾರುಕಟ್ಟೆ ತೆರೆದಿದ್ದರಿಂದ ಬೆಳೆಗಾರರಿಗೆ ಒಂದಷ್ಟು ಅನುಕೂಲ ಆಗಿತ್ತು. ಆದಾಗ್ಯೂ ಬೆಳೆಗಾರರಿಗೆ ಪ್ರೋತ್ಸಾಹಧನ ಕೊಡಿಸುವ ನಿಟ್ಟಿನಲ್ಲಿ ಹಾಗೂ ಬಜೆಟ್‌ನಲ್ಲಿ ರೇಷ್ಮೆಗಾಗಿ ಹಣ ಕಾಯ್ದಿರಿಸುವ ಕುರಿತು ಸಿಎಂ ಜತೆ ಚರ್ಚಿಸುವುದಾಗಿ ಸಚಿವರು ಭರವಸೆ ನೀಡಿದರು.