ಶಾಲಾ ಸಂಸತ್ ಮಕ್ಕಳಿಗೆ ಜ್ಞಾನದ ಸಂಪತ್ತು

web 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಾಲಾ ಸಂಸತ್ ರಚನೆಯಿಂದ ಮಕ್ಕಳಿಗೆ ಸಾಂವಿಧಾನಿಕ ಹುದ್ದೆಗಳ ಅರಿವು ಮೂಢಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಸಹಕಾರಿಯಾಗುತ್ತದೆ ಎಂದು ಉಪನಗರ ಪೊಲೀಸ್ ಠಾಣೆ ಸಿಪಿಐ ಶಂಕರಗೌಡ ಬಸನಗೌಡರ ಹೇಳಿದರು.
ಇಲ್ಲಿನ ಮೃತ್ಯುಂಜಯ ನಗರದ ಜನತಾ ಶಿಕ್ಷಣ ಸಮಿತಿಯ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ಸಂಸತ್ ರಚನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಯಲ್ಲಿ ಸಂಸತ್ ರಚನೆ ಮಾಡುವುದರಿಂದ ಮಕ್ಕಳಲ್ಲಿ ಮತದಾನ ಮಾಡುವುದು ಎಷ್ಟು ಮುಖ್ಯ ಹಾಗೂ ಎಂಥವರನ್ನು ಮಂತ್ರಿಗಳನ್ನಾಗಿ ಮಾಡಿದರೆ ನಮ್ಮ ಶಾಲೆ, ರಾಜ್ಯ ಅಥವಾ ದೇಶದ ವಾತಾವರಣ ನೆಮ್ಮದಿಯಿಂದ ಇರುತ್ತದೆ ಎಂಬುದು ಮನವರಿಕೆಯಾಗಲಿದೆ ಎಂದರು.
ಜೆಎಸ್‌ಎಸ್‌ನ ಶ್ರೀ ಮಂಜುನಾಥೇಶ್ವರ ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ ಮಾತನಾಡಿ, ಸಂಸತ್ ರಚನೆ ಮಾಡಿ ಮಕ್ಕಳಿಗೆ ವಿವಿಧ ಕೆಲಸಗಳನ್ನು ನೀಡುವುದರಿಂದ ಮಕ್ಕಳು ಮನೆ ಕೆಲಸಗಳನ್ನು ಜವಾಬ್ದಾರಿಯಿಂದ ನಿರ್ವಹಿಸುವುದನ್ನು ಕಲಿಯುತ್ತಾರೆ. ಸಮಯ ಪರಿಪಾಲನೆ, ಶಿಸ್ತು, ಗುರು-ಹಿರಿಯರಿಗೆ ಗೌರವ ನೀಡುವ ಸೌಜನ್ಯ ಬೆಳೆಸಿಕೊಳ್ಳುತ್ತಾರೆ ಎಂದರು.
ಶಾಲಾ ಸಂಸತ್ತಿನಲ್ಲಿ ಚುನಾಯಿತರಾದ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ಮತ್ತು ಸ್ಯಾಶ್ ನೀಡಿ ಪ್ರಮಾಣ ವಚನ ಭೋಧಿಸಲಾಯಿತು. ಮುಖ್ಯಾಧ್ಯಾಪಕಿ ತ್ರಿವೇಣಿ ಆರ್, ಚೇತನಾ ಪಿ, ಸೌಭಾಗ್ಯ ಡಿ, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net