

ಹಾಸನ: ಈಗಾಗಲೇ ಶಾಲೆಗಳು ಪ್ರಾರಂಭವಾಗಿದ್ದು, ಶಾಲಾ ವಾಹನಗಳ ಎಫ್‌ಸಿ, ಇನ್ಸೂರೆನ್ಸ್ ರಿನಿವಲ್, ರೋಡ್ ಟ್ಯಾಕ್ಸ್, ಡ್ರೈವಿಂಗ್ ಲೈಸೆನ್ಸ್ ನವೀಕರಿಸಿಕೊಳ್ಳಬೇಕು. ಶಾಲೆಯ ಮಾಲೀಕರು ಹಾಗೂ ವಾಹನಗಳ ಮಾಲೀಕರು ದಾಖಲೆಗಳನ್ನು ನವೀಕರಿಸಿಕೊಳ್ಳದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಟಿಒ ಅಧಿಕಾರಿ ಮಲ್ಲೇಶ್ ಎಚ್ಚರಿಕೆ ನೀಡಿದರು.
ಆರ್‌ಟಿಒ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 877 ಶಾಲಾ ಬಸ್ಸುಗಳಿದ್ದು, ಎರಡು ತಿಂಗಳು ಶಾಲಾ- ಕಾಲೇಜುಗಳಿಗೆ ರಜೆ ಇದ್ದುದರಿಂದ ವಾಹನದ ದಾಖಲಾತಿಗಳ ಅವಧಿ ಮುಗಿದು ಹೋಗಿರುತ್ತದೆ. ಹೀಗಾಗಿ ದಾಖಲೆಗಳನ್ನು ತಪಾಸಣೆ ಮಾಡಿಸಿ, ಅವಧಿ ಮೀರಿದ ದಾಖಲಾತಿಗಳನ್ನು ನವೀಕರಿಸಿಕೊಳ್ಳಬೇಕು. ಶಾಲೆಯ ಮಾಲೀಕರು ಇದನ್ನು ಖಾತರಿಪಡಿಸಿಕೊಂಡು ಶಾಲಾ ಮಕ್ಕಳನ್ನು ಕರೆತರಲು ವಾಹನ ಕಳುಹಿಸಬೇಕು. ಏನಾದರೂ ದುರ್ಘಟನೆ ನಡೆದರೆ ಎಲ್ಲರಿಗೂ ಕೆಟ್ಟ ಹೆಸರು ಬರುತ್ತದೆ. ಯಾವುದೇ ಒಂದು ದಾಖಲಾತಿ ಲೋಪವಾಗಿದ್ದರೂ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಈಗಾಗಲೇ ಎಲ್ಲೆಡೆ ಶಾಲೆಗಳು ಆರಂಭವಾಗಿರುವ ಹಿನ್ನಲೆಯಲ್ಲಿ ಮಕ್ಕಳಿಗೆ ತೊಂದರೆ ಆಗದಂತೆ ಶಾಲಾ ಮಾಲೀಕರು ಎಚ್ಚರ ವಹಿಸಬೇಕು.ಜಿಲ್ಲೆಯಲ್ಲಿ ಒಟ್ಟು 877 ಶಾಲಾ ವಾಹನಗಳಿದ್ದು ಅವುಗಳ ಎಫ್‌ಸಿ, ಇನ್ಸೂರೆನ್ಸ್ ಮತ್ತು ಡ್ರೈವಿಂಗ್ ಲೈಸೆನ್ಸ್ ರಿನಿವಲ್ ಆಗದಿದ್ದಲ್ಲಿ ಸರಿಪಡಿಸಿಕೊಳ್ಳುವಂತೆ ಶಾಲಾ ಮಾಲೀಕರಿಗೆ, ಬಿಇಒ ಮತ್ತು ಡಿಡಿಪಿಐ ಅವರಿ ಪತ್ರದ ಮೂಲಕ ತಿಳಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಶಾಲಾ ವಾಹನಗಳನ್ನು ತಪಾಸಣೆ ಮಾಡಲಾಗುವುದು. ಆ ಸಮಯದಲ್ಲಿ ಯಾವುದಾದರೂ ವಾಹನಗಳ ದಾಖಲಾತಿಗಳು ಸರಿ ಇಲ್ಲದಿದ್ದಲ್ಲಿ ತಕ್ಷಣವೇ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತದೆ. ಶಾಲಾ ವಾಹನಗಳು ವೇಗವಾಗಿ ಹೋಗುವುದು ಮತ್ತು ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳ ಮೇಲೆ ದಂಡ ವಿಧಿಸಲಾಗುವುದು. ಆಟೋದಲ್ಲಿ 12 ವರ್ಷದ ಒಳಗೆ ಮಕ್ಕಳಾದರೆ ನಾಲ್ಕೈದು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಬಹುದು. 12 ವರ್ಷ ಮೇಲ್ಪಟ್ಟವರು ಇದ್ದರೇ ಮೂರು ಜನರನ್ನು ಕರೆದೊಯ್ಯಲು ಅವಕಾಶವಿದೆ. ಇನ್ನು ಓಮಿನಿ ವಾಹನದಲ್ಲಿ ಎಷ್ಟು ಸೀಟಿನ ನಿಗದಿಯಿದೆ ಅಷ್ಟೇ ಮಕ್ಕಳನ್ನು ಮಾತ್ರ ಕರೆದೊಯ್ಯಬೇಕು. ಹಳೆಯ ವಾಹನಗಳು ಕಂಡು ಬಂದಲ್ಲಿ ಅಂತಹ ವಾಹನವನ್ನು ಸೀಜ್ ಮಾಡಲಾಗುವುದು. ಅನೇಕ ವಾಹನಗಳಲ್ಲಿ ಹೆಚ್ಚಿನ ಹೊಗೆ ಬಿಟ್ಟು ಪರಿಸರ ಹಾಳು ಮಾಡಲಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈಗಾಗಲೇ ಕೆಎಸ್‌ಆರ್‌ಟಿಸಿ ಇಲಾಖೆಗೂ ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರ್‌ಟಿಒ ಸೂಪರಿಂಟೆಂಡೆಂಟ್ ಕುಮಾರ್ ಉಪಸ್ಥಿತರಿದ್ದರು.